ಪುತ್ತೂರು: ಬಜಪೆ ಸಮೀಪದ ಗುರುವಾರ (ಮೇ.1)ದಂದು ನಡೆದ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟು ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ (ಮೇ 03) ನಗರದ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಹಿನ್ನೆಲೆ, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ಅಬ್ದುಲ್ ಸಪ್ವಾನ್, ನಿಯಾಜ್, ಮಹಮ್ಮದ್ ಮುಜಾಬಿಲ್, ಕಲಂದರ್ಶಾಫಿ, ಆದಿಲ್ ಮೆಹರೂಬ್, ರಂಜಿತ್ ಕಳಸ, ನಾಗರಾಜ್ ಕಳಸ ಮತ್ತು ರಿಜ್ವಾನ್ ಬಂಧಿತ ಆರೋಪಿಗಳು.
ಸುಹಾಸ್ ಶೆಟ್ಟಿ ಕೇಸ್ ನಲ್ಲಿ ಎಂಟು ಜನರು ಹಾಗೂ ಅಶ್ರಫ್ ಕೇಸ್ ನಲ್ಲಿ 21 ಜನರ ಬಂಧನ ಆಗಿದೆ. ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡಲು ಬಿಡುವುದಿಲ್ಲ. ಯಾವುದೇ ಸಮುದಾಯಕ್ಕೂ ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ. ರಾಜ್ಯ, ರಾಷ್ಟ್ರದ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಈ ಭಾಗ ಶಾಂತಿಯಿಂದ ಇರಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಕೋಮು ಗಲಭೆ ತಡೆಯಲು ಹೊಸ ಟಾಸ್ಕ್ ಪೋರ್ಸ್ ಕೋಮು ನಿಗ್ರಹ ಕಾರ್ಯಪಡೆ ರಚಿಸುವುದಾಗಿ ಗೃಹ ಸಚಿವರು ಹೇಳಿದರು. ಈ ಎರಡು ಜಿಲ್ಲೆಗೆ ಮಾತ್ರ ಇದು ಸೀಮಿತವಾಗಿರುತ್ತದೆ. ಪ್ರತ್ಯೇಕವಾಗಿ ಆ್ಯಂಟಿ ನಕ್ಸಲ್ ಫೋರ್ಸ್ ನಂತೆ ಆ್ಯಂಟಿ ಕಮ್ಯುನಲ್ ಫೋರ್ಸ್ ಕೆಲಸ ಮಾಡುತ್ತದೆ. ರೆಗ್ಯುಲರ್ ಪೊಲೀಸರೊಂದಿಗೆ ಸಮನ್ವಯದೊಂದಿಗೆ ಇದು ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದರು.