ಪುತ್ತೂರಿನಿಂದ ಶೃಂಗೇರಿಗೆ ಹೊರಟ ಬಸ್ಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ
ತಾಲೂಕು ಧರ್ಮ ಶಿಕ್ಷಣ ಸಮಿತಿಯಿಂದ ಉಚಿತ ಬಸ್ಗಳ ಸೌಲಭ್ಯ
ಸುಮಾರು 50ಕ್ಕೂ ಹೆಚ್ಚು ಬಸ್ಗಳಲ್ಲಿ ಶೃಂಗೇರಿಗೆ ಹೊರಟ ಭಕ್ತರು
ತೆಂಗಿನ ಕಾಯಿ ಒಡೆದು ಚಾಲನೆ ನೀಡಿದ ಈಶ್ವರ ಭಟ್ ಪಂಜಿಗುಡ್ಡೆ
ಶೃಂಗೇರಿಗೆ ತೆರಳುವವರಿಗೆಲ್ಲ ದೇವಳದ ವತಿಯಿಂದ ಉಪಹಾರ ವ್ಯವಸ್ಥೆ
ದಾರಿಯುದ್ದಕ್ಕೂ ನೀರಿನ ದಾಹ ತೀರಿಸಲು ಎಲ್ಲರಿಗೂ ನೀರಿನ ಬಾಟಲ್ ವಿತರಣೆ
ಪುತ್ತೂರು: ಪುತ್ತೂರಿನಲ್ಲಿ ಧರ್ಮ ಶಿಕ್ಷಣವನ್ನು ಜಾರಿಗೊಳಿಸುವ ನೆಲೆಯಲ್ಲಿ ಶ್ರೀ ಶಂಕರಾಚಾರ್ಯ ಸ್ಥಾಪಿತ ಶೃಂಗೇರಿ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕರಕಮಲ ಸಂಜಾತರಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಶೃಂಗೇರಿಯಲ್ಲಿ ಮೇ.5ರಂದು ಧರ್ಮ ಶಿಕ್ಷಣ ತರಗತಿಗಳು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಪುತ್ತೂರಿನಿಂದ ಹೊರಟ ಸಾವಿರಾರು ಮಂದಿ ಭಕ್ತರು ತೆರಳುವ ವಾಹನಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಚಾಲನೆ ನೀಡಲಾಯಿತು.

ಶೃಂಗೇರಿಗೆ ತೆರಳುವವರಿಗೆ ಉಚಿತ ಬಸ್ ಹಾಗೂ ಊಟೋಪಚರದ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗಿದ್ದು, ಎಲ್ಲಾ ಬಸ್ಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೇ.5ರಂದು ಬೆಳಗ್ಗೆ ಗಂಟೆ 9ಕ್ಕೆ ಹೊರಟಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಹೋಗುವ ಪ್ರಯಾಣ ಸುಖಕರವಾಗಿರುವಂತೆ ಮಹಾಲಿಂಗೇಶ್ವರ ದೇವರು ಆಶೀರ್ವದಿಸಲಿ ಎಂದು ಹೇಳಿದರು.

ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ತಾಲೂಕು ಧರ್ಮ ಶಿಕ್ಷಣ ಸಮಿತಿಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಕಾರ್ಯಾಧ್ಯಕ್ಷ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಎನ್.ಕೆ.ಜಗನ್ನಿವಾಸ ರಾವ್, ಮುಗೆರೋಡಿ ಬಾಲಕೃಷ್ಣ ರೈ, ಮಾಧವ ಸ್ವಾಮಿ, ರಾಜೇಶ್ ಬನ್ನೂರು, ಆರ್.ಸಿ.ನಾರಾಯಣ್, ರತ್ನಾಕರ ನಾಕ್, ಸುಬ್ರಹ್ಮಣ್ಯ ರಾವ್, ದಿನೇಶ್ ಜೈನ್ ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.