ಪುತ್ತೂರು: ಮುಳುಗು ಸೇತುವೆ ಎಂದೇ ಕುಖ್ಯಾತಿಗೆ ಹೆಸರು ಪಡೆದಿದ್ದ ಚೆಲ್ಯಡ್ಕ ಸೇತುವೆಗೆ ಮುಳುಗುವ ಭಾಗ್ಯ ಮಾತ್ರ ಇನ್ನೂ ಮುಗಿದಿಲ್ಲ ಎಂದೇ ಹೇಳಬಹುದಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ಚೆಲ್ಯಡ್ಕ ಸೇತುವೆಗೆ ಕೊನೆಗೂ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಮುಕ್ತಿ ದೊರೆತಿದ್ದು ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ಸೇತುವೆ ನಿರ್ಮಾಣದ ಕೆಲಸ ಶೇ.75 ರಷ್ಟು ಮುಗಿದಿದೆ. ಈ ನಡುವೆಯೇ ಮೇ.4 ರಂದು ಸಂಜೆ ಏಕಾಏಕಿ ಸೇತುವೆ ಮುಳುಗಡೆಯಾದ ಬಗ್ಗೆ ವರದಿಯಾಗಿದೆ.

ಚೆಲ್ಯಡ್ಕ ಸೇತುವೆಯಿಂದ ಮೇಲ್ಭಾಗದಲ್ಲಿ ನೀರ್ಪಾಡಿ ಕೂಟೇಲು ಎಂಬಲ್ಲಿ ನದಿಗೆ ಕಟ್ಟಲಾದ ಕಿಂಡಿಅಣೆಕಟ್ಟಿಗೆ ಹಲಗೆ ಜೋಡಿಸಿ ನೀರು ನಿಲ್ಲಿಸುವ ಕೆಲಸ ಆಗಿತ್ತು. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಅಣೆಕಟ್ಟು ಭಾಗದಲ್ಲಿ ಬಹಳಷ್ಟು ನೀರು ತುಂಬಿಕೊಂಡಿತ್ತು. ಏ.4 ರಂದು ಸಂಜೆ ಏಕಾಏಕಿ ಕಿಂಡಿಅಣೆಕಟ್ಟಿಗೆ ಹಾಸಿದ ಮರದ ಹಲಗೆ ಜಾರಿದ ಪರಿಣಾಮ ನೀರು ಒಮ್ಮೆಲೆ ಹರಿದಿದೆ. ಇದರಿಂದಾಗಿ ಕೆಳಭಾಗದಲ್ಲಿ ಸೇತುವೆ ನಿರ್ಮಾಣ ಕೆಲಸಕ್ಕೆ ಹಾಕಿದ ಟೆಂಟ್ ಕೂಡ ಮುಳುಗಡೆಯಾಗಿದೆ.
ಸೇತುವೆ ಮುಳುಗಡೆಯಾಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ತಿಳಿದುಬಂದಿದೆ. ಸೇತುವೆ ನಿರ್ಮಾಣ ಕೆಲಸಕ್ಕೆ ಅನುಕೂಲವಾಗುವಂತೆ ನಿರ್ಮಿಸಿದ ತಾತ್ಕಾಲಿಕ ಶೆಡ್ ಕೂಡ ನೀರಲ್ಲಿ ಮುಳುಗಿದ ಪರಿಣಾಮ ಸೇತುವೆ ನಿರ್ಮಾಣ ಕೆಲಸಕ್ಕೆ ತೊಂದರೆಯುಂಟಾಗಿದೆ. ಸ್ಥಳೀಯರು ಸೇರಿಕೊಂಡು ನೀರನ್ನು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚೆಲ್ಯಡ್ಕ ಗುಮ್ಮಟೆಗದ್ದೆ ತಾತ್ಕಾಲಿಕ ರಸ್ತೆ ಬಂದ್
ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ನಂತರ ಗುಮ್ಮಟೆಗದ್ದೆ ಪುತ್ತೂರು ಸಂಚರಿಸಲು ಸೇತುವೆ ಸಮೀಪ ತಾತ್ಕಾಲಿಕ ರಸ್ತೆ ನಿರ್ಮಿಸಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೆ.4 ರಂದು ಎರ್ಮೆಟ್ಟಿ ಎಂಬಲ್ಲಿ ಇರುವ ಅಣೆಕಟ್ಟಿನ ಹಲಗೆ ತೆಗೆದ ಪರಿಣಾಮ ಅಣೆಕಟ್ಟಿನ ನೀರು ಹರಿದು ಬಂದು ಸೇತುವೆ ನಿರ್ಮಾಣವಾಗುವ ಜಾಗದಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರ ಸ್ಥಗಿತ ಗೊಂಡಿದೆ ಎಂದು ತಿಳಿದು ಬಂದಿದೆ. ಸೇತುವೆ ಕಾಮಗಾರಿ ಮಾಡುವ ಕಾರ್ಮಿಕರು ಉಳಿದುಕೊಳ್ಳಲು ನಿರ್ಮಿಸಿದ ತಾತ್ಕಾಲಿಕ ಶೆಡ್ ಕೂಡ ನೆಲಸಮವಾಗಿದೆ. ಇದರಿಂದ ಆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬಹಳ ಸಮಸ್ಯೆಯಾಗಿದೆ.