ಪುತ್ತೂರು: ನಮ್ಮ ನೀರ ಸೆಲೆ ರಕ್ಷಿಸೋಣ ಮತ್ತು ಮಣ್ಣು ನಮ್ಮ ಆತ್ಮ ಎಂಬ ಪರಿಕಲ್ಪನೆಯಲ್ಲಿ ಪುತ್ತೂರಿನ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಪರಿಸರ ಪ್ರೇಮಿಗಳಿಂದ ಮಾಹಿತಿ, ಜಾಗೃತಿ ಅನುಷ್ಠಾನದ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಯೋಜನೆಯ ರೂವಾರಿ ಮತ್ತು ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಡಾ| ರಾಜೇಶ್ ಬೆಜ್ಜಂಗಳ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನೀರ ಸೆಲೆಗಳ ಅಧ್ಯಯ, ತ್ಯಾಜ್ಯ ವಿಲೇವಾರಿ ಜಾಗೃತಿ, ಮಣ್ಣಿನ ವೈಜ್ಞಾನಿಕ ಅಧ್ಯಯನ, ಮಣ್ಣಿನ ಕುರಿತಾದ ಜಾಗೃತಿ, ಜಲಾನಯನ ವೈವಿಧ್ಯತೆಯ ಕುರಿತು ಅಧ್ಯಯನದ ಕುರಿತು ವಿವಿಧ ಚಟುವಟಿಕೆ ನಡೆಸಲಾಗುವುದು ಎಂದ ಅವರು ಇದು ಒಂದೆರಡು ವರ್ಷದ ಪ್ರೊಜೆಕ್ಟ್ ಅಲ್ಲ. ನಿರಂತರ ನಡೆಯುತ್ತದೆ. ಇವತ್ತು ನದಿಗಳ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಜೀವ ವೈವಿಧ್ಯಗಳಿವೆ. ಆ ಪ್ರದೇಶದಲ್ಲಿ ಯಾವ ಯಾವ ಬೆಳೆ ಬೆಳೆಯಬಹುದು ಎಂದು ಪ್ರಕೃತಿ ಮೊದಲೇ ನಿರ್ಧರಿಸಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಬೆಳೆಯದಾಗ ಅಲ್ಲಿ ಪರಿಸರದ ಕೊಂಡಿಯೂ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಜಲಾನಯನ ಪ್ರದೇಶವನ್ನು ಮುಂದಿಟ್ಟುಕೊಂಡು ಅಲ್ಲಿಯ ಪ್ರದೇಶಕ್ಕೆ ಅನುಗುಣವಾದ ಮಾಹಿತಿ, ಜಾಗೃತಿ ಮತ್ತು ಅನುಷ್ಠಾನವನ್ನು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದು ಇವತ್ತು ನಾಳೆ ಆಗುವ ಪ್ರಶ್ನೆಯಲ್ಲ. ಒಟ್ಟಿನಲ್ಲಿ ನಾವು ಆರಂಭಿಸಿದ್ದೇವೆ. ಒಂದಷ್ಟು ಜನರಿಗೆ ನಾವು ಕೂಡಾ ಇದರಲ್ಲಿ ಭಾಗಿಯಾಗಬೇಕೆಂಬ ಕಲ್ಪಣೆ ಬಂದರೆ ನಮ್ಮ ಉದ್ದೇಶ ಸಾರ್ಥಕ ಆಗುತ್ತದೆ. ಜಲಾನಯನಕ್ಕೆ ಪೂರಕವಾಗಿ ಅಭಿವೃದ್ಧಿ ಬಂದಾಗ ಮಾತ್ರ ಜಾಗೃತಿಯನ್ನು ಜೊತೆಯಲ್ಲಿ ತರಲು ಸಾಧ್ಯ.
ನೀರು ಇಂಗಿಸುವಲ್ಲೂ ಕೂಡಾ ಎಲ್ಲಿ ಇಂಗಿಸುವುದು ಮುಖ್ಯ. ವೈಜ್ಞಾನಿಕ ಮನೋಭಾವನೆ ಬೇಕು. ನಮ್ಮೊಂದಿಗೆ ಸಾಕಷ್ಟು ಅನುಭವಿ ತಜ್ಞರು ಇದ್ದಾರೆ. ಅವರ ಸಲಹೆ ಪಡೆದುಕೊಂಡು ವಿವಿಧ ಚಟುವಟಿಕೆ ಆರಂಭಿಸುತ್ತೇವೆ. ಯಾರದಾರೂ ಈ ಕುರಿತು ಪ್ರೋತ್ಸಾಹ ನೀಡಿದರೆ ಅವರನ್ನು ಜೊತೆಯಲ್ಲಿ ಸೇರಿಸಿಕೊಳ್ಳಲಾಗುವುದು. ತ್ಯಾಜ್ಯ ವಿಲೇವಾರಿ, ನೀರು ಮತ್ತು ಮಣ್ಣು ಸಂರಕ್ಷಣೆಗೆ ಕೂಡಾ ಒಂದಷ್ಟು ಚಟುವಟಿಕೆ ಮಾಡುವ ಯೋಚನೆಯಿಂದ ಹಲವು ಯೋಜನೆ ಹಾಕೊಂಡಿದ್ದೇವೆ. ಕರಾವಳಿ ಉಭಯ ಜಿಲ್ಲೆಯಲ್ಲಿ ಸುಮಾರು 22 ನದಿಗಳು ಹರಿಯುತ್ತಿದೆ. ಇದರೊಂದಿಗೆ ಕೆರೆ, ಕೊಳ, ತೋಡುಗಳಿವೆ. ನೀರ ಸೆಳೆಗಳ ಅಧ್ಯಯನ, ಮಣ್ಣಿನ ಮೇಲೆ ಪ್ರಕೃತಿಗಳ ಅಧ್ಯಯನ, ಸಂಘ ಸಂಸ್ಥೆಗಳ ಜೊತೆ ಗೂಡಿ ಆಯ ಪ್ರದೇಶದಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದವರು ಹೇಳಿದರು.
ಪರಿಸರದ ನಡುವೆಯೇ ನಿಂತು ಯೋಚನೆ ಮಾಡಬೇಕು:
ಯೋಜನೆಯ ಸಲಹೆಗಾರ ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅವರು ಮಾತನಾಡಿ ಇವತ್ತಿನ ಕಾಲದಲ್ಲಿ ಎಲ್ಲವೂ ಮೇಲಿನಿಂದ ಕೆಳಗೆ ಬರುತ್ತದೆ. ಯಾಕೆಂದರೆ ನಮ್ಮ ಕಲಿಕೆಯ ಕ್ರಮ, ಯೋಜನೆ, ಯೋಚನೆ ಹಾಗಿದೆ. ಎಲ್ಲರು ಪರಿಸರದ ಬಗ್ಗೆ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ನಮ್ಮ ನೀರನ್ನು ನಾವೇ ಹಾಳು ಮಾಡಿ ಇದು ಪರಿಶುದ್ದ ನೀರು ಎಂದು ಇಲ್ಲಿ ತುಂಬಿಸಿ ಮಾರಾಟ ಮಾಡುವುದನ್ನು ಕಾಣುತ್ತೇವೆ. ಮಣ್ಣಿಗೆ ನಾವೇ ವಿಷ ಸೇರಿಸಿ ನಮ್ಮ ಅನ್ನವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಇವತ್ತಿನ ದಿನ ಮಾನದಲ್ಲಿ ಪರಿಸರದ ನಡುವೆಯೇ ನಿಂತು ಅದರ ಬಗ್ಗೆ ಯೋಚನೆ ಮಾಡಬೇಕೆಂಬ ಕ್ರಮವನ್ನು ನಮಗೆ ಕಲಿಸಿಕೊಟ್ಟ ಡಾ. ಶಿವರಾಮ ಕಾರಂತರ ಮಾರ್ಗದರ್ಶನದಂತೆ ಕೆಳಗೆಡೆಯಿಂದ ಅರಿವು ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ನಮ್ಮ ಶಾಲಾ ಕಾಲೇಜಿನಲ್ಲಿ ಬಾಲ್ಯವ್ಯವಸ್ಥೆಯಲ್ಲಿ ಪರಿಸರದ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಲಹೆಗಾರ ಕೃಷ್ಣಪ್ರಸಾದ್ ನಡ್ಸಾರ್ ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ದ.ಕ.ಜಿಲ್ಲೆಯಲ್ಲಿ ನೀರ ಸೆಲೆಗಳ ರಕ್ಷಣೆಗಾಗಿ ಪರಿಸರ ಪ್ರೇಮಿಗಳಿಂದ ಮಾಹಿತಿ, ಜಾಗೃತಿ, ಅನುಷ್ಠಾನದ ಯೋಜನೆಗೆ ಚಾಲನೆ