ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಭಾಷಣ – ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲು

0

ಉಪ್ಪಿನಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ತೆಕ್ಕಾರು ನಿವಾಸಿ ಇಬ್ರಾಹೀಂ ಎಸ್.ಬಿ. ಅವರು ದೂರು ನೀಡಿದ್ದು, ಕಳೆದ ಎಪ್ರಿಲ್ 25ರಿಂದ ತೆಕ್ಕಾರು ಗ್ರಾಮದ ದೇವರಗುಡ್ಡೆ ಭಟ್ರಬೈಲು ಎಂಬಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ನಾನು ಕೂಡಾ ಹೋಗುತ್ತಿದ್ದೆನು. ಮೇ.3ರಂದು ನಡೆದ ಸಭಾ ಕಾರ್ಯಕ್ರಮಕ್ಕೂ ನಾನು ಹೋಗಿದ್ದು, ರಾತ್ರಿ 9ರಿಂದ 9:30ರ ಮಧ್ಯೆ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಶಾಸಕ ಹರೀಶ್ ಪೂಂಜಾರವರು ಭಾಷಣ ಮಾಡುತ್ತಾ, ‘ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್‌ಲೈಟ್ ಒಡೆದಿದ್ದಾರೆ. ಜನರೇಟರ್‌ನ ಡೀಸೆಲ್ ಕದ್ದಿದ್ದಾರೆ ಎಂಬ ಮಾಹಿತಿ ನನಗೆ ಸ್ಥಳೀಯರಿಂದ ಬಂದಿದ್ದು, ಈ ವೇಳೆ ನಾನು ಅವರಿಗೆ ಹೇಳಿದೆ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮುಗಿಯುವ ಮೊದಲು ಇದು ಯಾರೆಂದು ತಿಳಿದು ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕೆಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಆಮಂತ್ರಣ ಪತ್ರ ಕೊಟ್ಟ ಕಾರಣ ಬ್ಯಾರಿಗಳು ಟ್ಯೂಬ್ ಹೊಡೆದಿದ್ದಾರೆ. ಅವರಿಗೆ ಆಮಂತ್ರಣ ಪತ್ರ ಕೊಡಬಾರದಿತ್ತು. ಅವರನ್ನು ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದೂಗಳು. ಹಿಂದೂಗಳೇ ಅವರನ್ನು ಸೇರಿಸಬಾರದು ಎಂದು ಉಲ್ಲೇಖಿಸಿ ಮಾತನಾಡಿದ್ದಾರೆ ಹಾಗೂ ಮತ್ತೆ ಮುಂದುವರಿದು ಪ್ರಸ್ತುತ ತೆಕ್ಕಾರಿನಲ್ಲಿ 1200 ಮುಸ್ಲಿಮರು ಇದ್ದಾರೆ. ನಾವು 150 ಮನೆಯವರು ಇದ್ದೇವೆ. ಇನ್ನು ಕೆಲ ವರ್ಷದಲ್ಲಿ ಮುಸ್ಲಿಮರು 600 ಜನ ಆಗುವುದಿಲ್ಲ. ಇನ್ನು 10 ವರ್ಷ ಕಳೆದರೆ ಮುಸ್ಲಿಮರ ಜನಸಂಖ್ಯೆ 5 ಸಾವಿರ ಜನ ಆಗುತ್ತಾರೆ. ಮುಸ್ಲಿಮರು 5000 ಜನ ಅಲ್ಲ 10 ಸಾವಿರ ಜನ ಆದರೂ ಅವರುಗಳನ್ನು ಎದುರಿಸಿ ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿಕೊಂಡು ದೇವರ ಪೂಜೆಯನ್ನು ಮಾಡಿಕೊಂಡು ಬರಬೇಕು ಎಂಬುದಾಗಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೇ, ಒಂದು ಧರ್ಮವನ್ನು ಇನ್ನೊಂದು ಧರ್ಮದೊಂದಿಗೆ ಎತ್ತಿ ಕಟ್ಟಿ ಕೋಮು ಭಾವನೆಯನ್ನು ಉಂಟು ಮಾಡಿ ಧರ್ಮ- ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇವರ ಈ ಭಾಷಣವನ್ನು ನಾನು ನೇರವಾಗಿ ನೋಡಿ ಆಲಿಸಿರುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ನೋಡಿದ್ದೇನೆ. ಈ ರೀತಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರನ್ನು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ಶಾಸಕ ಹರೀಶ್ ಪೂಂಜಾರ ಮೇಲೆ ಅ.ಕ್ರ. 36/2025 ಕಲಂ 196,353 (2) ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here