ಪಂರ್ದಾಜೆ: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

0

ನೆಲ್ಯಾಡಿ: ಬಜತ್ತೂರು ಗ್ರಾಮದ ಪಂರ್ದಾಜೆ ಎಂಬಲ್ಲಿ ಮೂರು ತಿಂಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೇ.4ರಂದು ಮಧ್ಯಾಹ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಬಜತ್ತೂರು ಗ್ರಾಮದ ಪಂರ್ದಾಜೆ ನಿವಾಸಿ, ಕೃಷಿಕ ತೋಮಸ್ ಎ.ವಿ.(65.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಫೆ.1ರಂದು ಮನೆಯ ಅಂಗಳದಲ್ಲಿ ಹಿಟಾಚಿ ಕೆಲಸ ಮಾಡಿಕೊಂಡಿದ್ದಾಗ ಅದಕ್ಕೆ ತಾಗುತ್ತಿದ್ದ ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಕಟ್ಟಿದ್ದ ಬಟ್ಟೆ ಒಣಗಿಸುವ ಹಗ್ಗವನ್ನು ಬಿಚ್ಚಿ ಮೇಲಕ್ಕೆ ಕಟ್ಟುವ ಸಲುವಾಗಿ ತೆಂಗಿನ ಮರಕ್ಕೆ ಹತ್ತಿ ಹಗ್ಗವನ್ನು ಬಿಚ್ಚಿ ಸುಮಾರು 7 ಅಡಿ ಎತ್ತರದಲ್ಲಿ ಕಟ್ಟುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ಬಿದ್ದ ರಭಸಕ್ಕೆ ತೋಮಸ್ ಅವರ ಕುತ್ತಿಗೆಗೆ ಗಾಯವಾಗಿದ್ದಲ್ಲದೇ ಬಲ ಬದಿ ಅಂಗಾಂಗ ಸಂಪೂರ್ಣ ಬಲಹೀನತೆಗೊಂಡಿತ್ತು. ಇವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬಳಿಕ ಅಲ್ಲಿಂದ ಏ.7ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೇ 4 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮೃತರ ಸೊಸೆ ಅನ್ನಮ್ಮಸಂತೋಷ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಆಶಾ ಕಾರ್ಯಕರ್ತೆಯರಾಗಿರುವ ಲಿಸ್ಸಿ ತೋಮಸ್, ಪುತ್ರ ಸಂತೋಷ್, ಓರ್ವ ಪುತ್ರಿ, ಸೊಸೆ, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here