ದುರಾಸೆ ದೂರ ಮಾಡಿದಾಗ ಮನಸ್ಸಿಗೆ ಸಂತೋಷ ದೊರಕುತ್ತದೆ: ಡಾ. ಬೆಜ್ಜಂಗಳ
ಪುತ್ತೂರು: ದುರಾಸೆಗಳನ್ನು ದೂರ ಮಾಡಿದಾಗ ಮನಸ್ಸಿಗೆ ಸಂತೋಷ ದೊರಕುತ್ತದೆ ಎಂದು ಸಂಶೋಧನಾ ಪ್ರಾಧ್ಯಾಪಕರು ಮತ್ತು ತರಬೇತುದಾರರಾದ ಡಾ. ರಾಜೇಶ್ ಬೆಜ್ಜಂಗಳ ಹೇಳಿದರು.
34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮೇ.6ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಆಚಾರ, ವಿಚಾರ, ಪೂಜೆ, ಪುನಸ್ಕಾರದ ಜತೆಗೆ ಆತ್ಮ ಸಂತೃಪ್ತಿಯೂ ಮುಖ್ಯ ಎಂದರು. ಅತೃಪ್ತಿಯೇ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವೊಂದು ಕಾರಣಗಳಿಂದ ಮನಸ್ಸು ಸಂಕುಚಿತಗೊಳ್ಳುತ್ತದೆ. ನಮಗೆ ನಾವೇ ಗೌರವ ಕೊಟ್ಟಾಗ ಮನಸ್ಸು ಶುದ್ಧವಾಗುತ್ತದೆ. ಅನ್ಯರ ಬಗ್ಗೆ ಅನಗತ್ಯ ಅಲೋಚನೆ ಮಾಡದೆ ನಮ್ಮ ಬಗ್ಗೆ ನಾವು ಯೋಚಿಸಬೇಕು. ಹಾಗಾದಾಗ ಮನಸ್ಸು ಶುದ್ಧವಾಗುತ್ತದೆ. ಅನಾರೋಗ್ಯ ದೂರವಾಗಿ ಆರೋಗ್ಯ ಹೆಚ್ಚುತ್ತದೆ ಎಂದು ಹೇಳಿದ ಅವರು ದೇವರು, ದೈವ, ಪ್ರಕೃತಿಯನ್ನು ನಂಬುವ ಹಾಗೆಯೇ ನಮ್ಮನ್ನು ನಾವು ನಂಬಬೇಕು ಎಂದು ಹೇಳಿದರು.
ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮೊಕ್ತೇಸರ ಯು.ಜಿ.ರಾಧಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತನ್ಯ ಮತ್ತು ಅಹಲ್ಯ ಐ. ಪ್ರಾರ್ಥಿಸಿದರು. ಸಂತೋಷ್ ಕುಮಾರ್ ಶಾಂತಿನಗರ ಮತ್ತು ಶೇಖರ ಪೂಜಾರಿ ನಿಡ್ಯ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಕೆ. ಸಹಕರಿಸಿದರು. ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಮತ್ತು ದೇವಸ್ಥಾನದ ಅರ್ಚಕ ಪ್ರದೀಪ್ ಶಾಸ್ತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.