ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನರವರ ಅಧ್ಯಕ್ಷತೆಯಲ್ಲಿ ಮೆ.6 ರಂದು ನಡೆಯಿತು.
ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳ ನಿರ್ವಹಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಳೆಗಾಲ ಆರಂಭವಾಗುವ ಮೊದಲು ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಬದಿ ಚರಂಡಿ ಸ್ವಚ್ಚ ಗೊಳಿಸ ಬೇಕಾಗಿದೆ. ಆದರೆ ಕೆಲವು ಕಡೆ ರಸ್ತೆಯ ಅಂಚಿನಲ್ಲಿ ಆವರಣ ಗೋಡೆ ನಿರ್ಮಿಸಿರುವುದು ಕೂಡ ಸಮಸ್ಯೆಯಾಗಿದೆ. ಆದುದರಿಂದ ಅಂತಹ ಆವರಣ ಗೋಡೆಗಳನ್ನು ತೆರವುಗೊಳಿಸಲು ಗೋಡೆ ನಿರ್ಮಿಸಿದವರಿಗೆ ನೋಟೀಸು ನೀಡುವುದು ಎಂದು ನಿರ್ಣಯಿಸಲಾಯಿತು.
ಕೀಲಂಪಾಡಿ, ಇರ್ದೆ, ಕೋನಡ್ಕ ಬರೆ ಜರಿತ ಬಗ್ಗೆ ಶಾಸಕರಿಗೆ ಬರೆಯುವುದು
ಪಂಚಾಯತ್ ವ್ಯಾಪ್ತಿಯ ಕೀಲಂಪಾಡಿ, ಇರ್ದೆ, ಕೋನಡ್ಕ ಎಂಬಲ್ಲಿ ಬರೆ ಜರಿದು ಬಿದ್ದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಅದನ್ನು ಸರಿಪಡಿಸುವ ಕಾಮಗಾರಿ ನಡೆಸಲು ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇರುವುದರಿಂದ ಅದರ ಬಗ್ಗೆ ಶಾಸಕರಿಗೆ ಪತ್ರ ಬರೆಯುವುದು ಎಂದು ನಿರ್ಣಯಿಸಲಾಯಿತು.
ಪರಿಶಿಷ್ಟ ಜಾತಿ ಪಂಗಡಗಳಿಗೆ ಮತ್ತು ವಿಕಲಚೇತನರ ಕಲ್ಯಾಣ ನಿಧಿಯಲ್ಲಿ ಮೀಸಲಿರಿಸಿದ ಅನುದಾನದ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಚರ್ಚಿಸಲಾಯಿತು.ಮೆ.13 ರಂದು ಬೆಳಿಗ್ಗೆ ಗಂಟೆ 10 ಕ್ಕೆ ಅಧ್ಯಕ್ಷರ ಸೂಚನೆ ಮೇರೆಗೆ ವಿಶೇಷ ತುರ್ತು ಸಭೆಯನ್ನು ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಇಲಾಖಾ ಸುತ್ತೋಲೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಮಹೇಶ್.ಕೆ, ಸದಸ್ಯರಾದ ಚಂದ್ರಶೇಖರ ರೈ, ವಿನೋದ್ ರೈ ಗುತ್ತು, ರಮ್ಯ, ಮೊಯಿದುಕುಂಞ, ನವೀನ ರೈ, ಲಲಿತ ಚಿದಾನಂದ, ಗೋಪಾಲ, ಗಂಗಾಧರ ಗೌಡ, ಪವಿತ್ರ. ಡಿ, ಲಲಿತ, ಸುಮಲತಾ, ಉಮಾವತಿ.ಜಿ, ಬೇಬಿ. ಪಿ, ಪ್ರಕಾಶ್ ರೈ, ಪಿಡಿಒ ಸೌಮ್ಯ, ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ, ಗ್ರಂಥ ಪಾಲಕಿ ಪ್ರೇಮಲತಾ ಸಹಕರಿಸಿದರು.