ಮರಿ ಬಿದ್ದಿದೆ ಎಂದು ತಾಯಿ ಬೆಕ್ಕು ಮನೆಮಂದಿಯ ಜೊತೆ ಅಲವತ್ತು
ಪುತ್ತೂರು: ಬಾವಿಗೆ ಬಿದ್ದ ಬೆಕ್ಕಿನ ಮರಿಯೊಂದನ್ನು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಪುತ್ತೂರು ದರ್ಬೆಯಲ್ಲಿನ ವಿಶ್ವಾಸ್ ಶೆಣೈ ಅವರ ಮನೆ ವಠಾರದಲ್ಲಿ ಮೇ 9 ರಂದು ಬೆಳಗ್ಗೆ ನಡೆದಿದೆ.
ದರ್ಬೆ ನಿವಾಸಿ ಕೆ ವಿ ಶೆಣೈ ಪೆಟ್ರೋಲ್ ಪಂಪ್ ಮಾಲಕ ವಿಶ್ವಾಸ್ ಶೆಣೈ ಅವರು ಮನೆಯಲ್ಲಿದ್ದ ಸಂದರ್ಭ ಬೆಕ್ಕೊಂದು ಅವರ ಕಾಲಬುಡಕ್ಕೆ ಬಂದು ಪರಚುತಿತ್ತು. ಅದರ ಕುರಿತು ಅಷ್ಟೊಂದು ಗಮನಕ್ಕೆ ತೆಗೆದುಕೊಳ್ಳದಿದ್ದಾಗ ಬೆಕ್ಕು ನೇರ ಬಾವಿಯ ಕಟ್ಟೆಯ ಬಳಿ ತೆರಳಿ ಕೂಗಲು ಆರಂಭಿಸಿತು. ಆಗ ಬೆಕ್ಕು ಬಾವಿಗೆ ಬೀಳುವುದು ಬೇಡ ಎಂದು ಅದನ್ನು ಅಲ್ಲಿಂದ ಓಡಿಸಲು ಬಾವಿಯ ಬಳಿ ಹೋದಾಗ ಬಾವಿಯೊಳಗಿನಿಂದ ಬೆಕ್ಕಿನ ಮರಿಯೊಂದರ ಕೂಗು ಕೇಳಿ ಬಂದಿದೆ.
ಹಾಗೆಂದು ಬಾವಿಯೊಳಗೆ ಇಣುಕಿ ನೋಡಿದಾಗ ಬೆಕ್ಕು ಇರುವುದು ಬೆಳಕಿಗೆ ಬಂದಿದೆ. ಕೊನೆಗೆ ಮನೆಯ ವಠಾರದಲ್ಲಿ ಬಾಡಿಗೆ ಕೊಠಡಿಯಲ್ಲಿರುವ ಸಂತೃಪ್ತಿ ಹೊಟೇಲ್ ನೌಕರ ತನುಜ್ ಮತ್ತು ಹರಿಪ್ರಸಾದ್ ಹೊಟೇಲ್ ನ ನೌಕರ ನಾಗರಾಜ್ ವಿಷಯ ತಿಳಿದು ತಮ್ಮ ಜೀವದ ಹಂಗು ತೊರೆದು ಬಾವಿಗೆ ಇಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.

ಒಟ್ಟು ಘಟನೆಯಲ್ಲಿ ಯುವಕರ ಪಾತ್ರ ಒಂದು ಕಡೆಯಾದರೆ ಬೆಕ್ಕು ತನ್ನ ಮರಿಯ ರಕ್ಷಣೆಗೆ ಅಂಗಲಾಚಿಕೊಂಡಿರುವುದು ಪ್ರಾಣಿ ಸ್ನೇಹ ಬೆಳೆಸಿದೆ. ಬೆಕ್ಕಿನ ಮರಿ ಬಾವಿಗೆ ಬಿದ್ದಿರುವ ಕುರಿತು ಅದರ ತಾಯಿ ಬೆಕ್ಕು ಮನೆ ಮಂದಿಯ ಮುಂದೆ ಅಲವತ್ತುಗೊಂಡ ಘಟನೆಯೇ ರೋಚಕ.