ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀ ರಾಮ ಮಂದಿರದ ವಠಾರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ‘ಭೋಜನಾಲಯ’ದ ಬಗ್ಗೆ ಮಾಹಿತಿಯನ್ನೊಳಗೊಂಡ ಮನವಿ ಪತ್ರದ ಬಿಡುಗಡೆಯು ಮೇ.8 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಸುಮಾರು 42 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಭೋಜನಾಲಯ ನಿರ್ಮಾಣವಾಗಲಿದ್ದು ಇದರಲ್ಲಿ ಮುಖ್ಯವಾಗಿ ಉಪಹಾರ ಭವನ, ಪಾಕಶಾಲೆ, ದಿನಸಿ ಹಾಗೂ ಪಾತ್ರೆ ಸಾಮಾನು ಸಂಗ್ರಹ ಕೊಠಡಿ, ಶೌಚಾಲಯ ಹಾಗೂ ಕಛೇರಿಯನ್ನು ಒಳಗೊಂಡಿದೆ. ಈ ಭೋಜನಾಲಯ ನಿರ್ಮಾಣಕ್ಕೆ ಊರಪರವೂರ ದಾನಿಗಳ ಸಹಕಾರ ಅಗತ್ಯವಿದ್ದು ಈ ನಿಟ್ಟಿನಲ್ಲಿ ಮನವಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಪ್ರಾರಂಭದಲ್ಲಿ ಸಪರಿವಾರ ಶ್ರೀರಾಮಚಂದ್ರ ದೇವರಿಗೆ ಹಾಗೂ ಸ್ಥಳ ಸಾನಿಧ್ಯ ದೈವ ದೇವರುಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶ್ರೀ ರಾಮ ಮಂದಿರದ ವಠಾರದಲ್ಲಿದ್ದ ಹಳೆಯ ಪಾಕಶಾಲೆಯನ್ನು ತೆರವುಗೊಳಿಸುವ ಬಗ್ಗೆ ಒಂದು ದಿನದ ಶ್ರಮದಾನವು ನಡೆಯಿತು. ಶ್ರಮದಾನದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಸದಸ್ಯರುಗಳು, ಭಜನಾ ಮಂಡಳಿ ಸದಸ್ಯರುಗಳು, ಗೌರವ ಸಲಹೆಗಾರರು, ಭಜನಾ ಸೇವಾರ್ಥಿಗಳು, ಊರಪರವೂರ ಭಕ್ತಾಧಿಗಳು ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.