ಬೆಳಿಗ್ಗೆ 09-01 * 11 ವಿಭಾಗಗಳಲ್ಲಿ ತಪಾಸಣೆ * ಉಚಿತ ಔಷಧಿ ವಿತರಣೆ
ಪುತ್ತೂರು: ವರ್ತಕರ ಸಂಘ ಕುಂಬ್ರ ಇದರ ಆಶ್ರಯದಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಮಂಗಳೂರು ಇವರುಗಳ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರ ಹಾಗೂ ಕಣ್ಣಿನ ಉಚಿತ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಮೇ.11 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಲಿದೆ.
ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ಸಭಾಧ್ಯಕ್ಷತೆ ವಹಿಸಲಿದ್ದು, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ.ವಿ.ಜಿಯ ಡಾ.ಕೆ.ವಿ ಚಿದಾನಂದ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಆಕರ್ಷಣೆ ಇಂಡಸ್ಟ್ರೀಸ್ನ ಸಾದಿಕ್ ಹಾಜಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ತಾರಾನಾಥ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಗೌರವ ಸಲಹೆಗಾರರುಗಳಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈ, ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಪ್ರ.ಕಾರ್ಯದರ್ಶಿ ಭವ್ಯ ರೈ ಹಾಗೂ ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.
ಏನೆಲ್ಲಾ ತಪಾಸಣೆ ಇದೆ ಗೊತ್ತಾ…?
ಶಿಬಿರದಲ್ಲಿ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ಲಭ್ಯವಿದೆ. ಮುಖ್ಯವಾಗಿ ಶೀತ, ಜ್ವರ, ಕೆಮ್ಮು, ಬಿಪಿ.ಶುಗರ್, ರಕ್ತಹೀನತೆ, ಉಸಿರಾಟದ ತೊಂದರೆ, ಹರ್ನಿಯಾ, ಆಪೆಂಡಿಕ್ಸ್, ಪಿತ್ತಕೋಶದ ತೊಂದರೆ, ಕಿಡ್ನಿ ಸ್ಟೋನ್, ಅಪೌಷ್ಟಿಕತೆ, ಥೈರಾಯ್ಡ್, ಕಿವಿ ಸೋರುವಿಕೆ, ಕಣ್ಣಿನ ಪೊರೆ, ದೃಷ್ಟಿ ಸಂಬಂಧಿತ ಖಾಯಿಲೆಗಳು, ಕಜ್ಜಿ, ತುರಿಕೆ, ಅಲರ್ಜಿ, ಲೈಂಗಿಕ ರೋಗಳು, ಗರ್ಭಕೋಶಕ್ಕೆ ಸಂಬಂಧಪಟ್ಟ ಖಾಯಿಲೆ, ಗರ್ಭಿಣಿ ಚಿಕಿತ್ಸೆ, ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು, ಬಂಜೆತನ, ಎಲುಬು, ಕೀಲು ಸಂಬಂಧಿಸಿದ ಖಾಯಿಲೆಗಳು, ಬಾಯಿಯ ತಪಾಸಣೆ ಹಾಗೇ ಆಯುರ್ವೇದದಲ್ಲಿ ಪಂಚಕರ್ಮ, ಕಾಯ ಚಿಕಿತ್ಸಾ, ಪ್ರಸೂತಿತಂತ್ರ, ಶಲ್ಯತಂತ್ರ, ಕೌಮಾರಭೃತ್ಯ, ಶಾಲಾಕ್ಯತಂತ್ರ ಇತ್ಯಾದಿ ತಪಾಸಣೆಗಳು ಲಭ್ಯವಿದೆ. ಕಣ್ಣಿನ ತಪಾಸಣೆಯನ್ನು ಮಾಡಿದ ಬಳಿಕ ಅಗತ್ಯವಿದ್ದಲ್ಲಿ ಕನ್ನಡಕವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ಲಾ ವಿಭಾಗದ ಚಿಕಿತ್ಸೆಗೆ ಅನುಭವಿ ವೈದ್ಯರಿಂದ ಉಚಿತ ತಪಾಸಣೆ ನಡೆಯಲಿದೆ ಅಲ್ಲದೆ ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಲಾಗುತ್ತದೆ.