ಸವಣೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೂಡಿ ಬಂತು ಯೋಗ- ಮೈಸೂರು ವಿಭಾಗದ ಅಧಿಕಾರಿಗಳಿಂದ ಮೇ.30ರಂದು ಸ್ಥಳ ಪರಿಶೀಲನೆ

0

ಪುತ್ತೂರು: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಮಧ್ಯೆ ಸವಣೂರು ಎಂಬಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮೈಸೂರು ವಿಭಾಗದ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಲು ಮೇ.30ರಂದು ಸವಣೂರಿಗೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ರೈಲು ಬಳಕೆದಾರ ಉಮೇಶ್ ಕುಮಾರಮಂಗಲ ಬೇರಿಕೆ ಎಂಬವರು ಮಾಹಿತಿ ಹಕ್ಕಿನಲ್ಲಿ ರೈಲೈ ಮೇಲ್ಸೇತುವೆ ನಿರ್ಮಾಣದ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ದೊರೆತಿದೆ. ಸವಣೂರು ಎಂಬುದು ಬೆಳೆಯುತ್ತಿರುವ ಪುಟ್ಟ ನಗರ. ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಬರುವ ರೈಲು ಸವಣೂರು ರೈಲ್ವೆಗೇಟ್‌ನಲ್ಲಿ ರೈಲು ಆಗಮಿಸುವಾಗ ಗೇಟ್ ಹಾಕುತ್ತಾರೆ. ಸುಮಾರು 10 ರಿಂದ 15 ನಿಮಿಷ ಗೇಟ್ ಹಾಕಲಾಗುತ್ತದೆ. ರೈಲು ಮತ್ತು ಗೂಡ್ಸ್ ರೈಲು ಪ್ರತಿ ದಿನ ಸುಮಾರು 20 ಬಾರಿ ಸಂಚಾರಿಸುತ್ತದೆ. ಅಂದಾಜು ಪ್ರಕಾರ ದಿನವೊಂದಕ್ಕೆ 300 ನಿಮಿಷದಷ್ಟು ಸಮಯ ರೈಲು ಗೇಟ್ ಹಾಕುವ ಪರಿಸ್ಥಿತಿ ಇರುವುದರಿಂದ ವಾಹನ ಸವಾರು ಕಾಯುವ ದೀರ್ಘಕಾಲದ ಸಮಸ್ಯೆ ಜೀವಂತವಾಗಿದೆ.

ಪದೇ ಪದೇ ರೈಲುಗಳು ಹಾದು ಹೋಗುವುದರಿಂದ ಗೇಟ್‌ನಲ್ಲಿ ದೀರ್ಘ ಕಾಲ ಕಾಯಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಸ್ಥಳೀಯ ಸರಕಾರಿ ಶಾಲೆಗಳು ಮತ್ತು ಕಾಲೇಜ್‌ಗಳು, ವಿದ್ಯಾರಶ್ಮಿ ವಿದ್ಯಾಲಯ ಮತ್ತು ಕಾಲೇಜ್, ಪುತ್ತೂರಿನ ವಿವೇಕಾನಂದ, ಸಂತ ಫಿಲೋಮಿನಾ ಕಾಲೇಜ್ ಹಾಗೂ ಸರಕಾರಿ ಆಸ್ಪತ್ರೆಗಳು, ಕ್ಯಾಂಪ್ಕೋ, ಬಿಂದು ಸಂಸ್ಥೆ, ತಾಲೂಕು ನಾಡಕಚೇರಿ ಕಡಬ ಮತ್ತು ಪುತ್ತೂರು ಮತ್ತು ಇತರ ಕೆಲಸದ ಸ್ಥಳಗಳಿಗೆ ಹೋಗುವ ವಾಹನಗಳಿಗೆ ಪೀಕ್ ಆವರ್ಸ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.

ಮೇಲ್ಸೇತುವೆ ನಿಮಾಣ ಮಾಡಬೇಕೆನ್ನುವ ಬೇಡಿಕೆ ಕೂಡ ನಿರಂತರವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಅಂದಿನ ಕೇಂದ್ರ ಸಚಿವರಾದ ವಿ.ಧನಂಜಯ ಕುಮಾರ್, ಡಿ.ವಿ.ಸದಾನಂದ ಗೌಡ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಮನಿ ಸಲ್ಲಿಸಿರುವ ಪರಿಣಾಮ ಅವರು ಸ್ಥಳ ಪರಿಶೀಲಿಸಿ, ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಸವಣೂರು-ಬೆಳ್ಳಾರೆ ರಸ್ತೆ ರಾಜ್ಯ ಹೆದ್ದಾರಿಯಾಗಿ ಮಾರ್ಪಟಿರುವುದರಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಹೇಳಲಾಗಿದೆ.

ಇಷ್ಟಾದರೂ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನುವ ಕಾಳಜಿಯಿಂದ ಸವಣೂರಿನ ನಿವಾಸಿಯಾಗಿರುವ ಉಮೇಶ್ ಕುಮಾರಮಂಗಲ ಬೇರಿಕೆ ಅವರು ಈ ಗೇಟ್‌ನಲ್ಲಿನ ಪ್ರಸ್ತುತ ಟ್ರಾಫಿಕ್ ಮಾದರಿಗಳನ್ನು ಕೂಲಂಕಷವಾಗಿ ಪರಿಶೀಸುವಂತೆ ಮತ್ತು ಮೇಲ್ಸೇತುವೆ ಅಥವಾ ಕೆಳಸೇತುವೆಯಂತಹ ಪರ್ಯಾಯ ಮೂಲಸೌಕರ್ಯ ಆಯ್ಕೆಗಳನ್ನು ಪರಿಗಣಿಸುವ ಮೂಲಕ ವಿಳಂಬವನ್ನು ಕಡಿಮೆ ಮಾಡಲು ಸಂಭ್ಯಾವ್ಯ ಪರಿಹಾರಗಳನ್ನು ಅನ್ವೇಷಿಸುವಂತೆ ಈಗಾಗಲೇ ತಾವುಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕಿನಲ್ಲಿ ರೈಲ್ವೇ ಅಧಿಕಾರಿಗಳನ್ನು ಕೇಳಿದ್ದರು. ಪತ್ರವನ್ನು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಕ್ಯಾ. ಬ್ರಿಜೇಶ್ ಚೌಟ, ರೈಲ್ವೆ ಅಧಿಕಾರಿಗಳಿಗೆ ರವಾನಿಸಿದ್ದರು. ಇದಕ್ಕೆ ಉತ್ತರಿಸಿದ ರೈಲ್ವೇ ಅಧಿಕಾರಿಗಳು ಸವಣೂರು- ಬೆಳ್ಳಾರೆ ರೈಲ್ವೇ ಲೆವೆಲ್ ಕ್ರಾಸಿಂಗ್‌ನಲ್ಲಿ ಕೆಳಸೇತುವೆ ನಿರ್ಮಿಸಲು ಸಾಧ್ಯವಿಲ್ಲ. ಆದಾಗ್ಯೂ ರಸ್ತೆ ಮೇಲ್ಸೇತುವೆಯ ಕಾರ್ಯ ಸಾಧ್ಯತೆಯನ್ನು ಕೈಗೊಳ್ಳಲಾಗುತ್ತಿದೆ. ಮೇ.30ರಂದು ಸ್ಥಳ ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಕೆಲಸವನ್ನು ಪ್ರಸ್ತಾಪಿಸಲಾಗುವುದು ಎಂದಿದ್ದಾರೆ. ಗೇಟ್‌ನಲ್ಲಿನ ಪ್ರಸ್ತುತ ಟ್ರಾಫಿಕ್ ಮಾದರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮೇಲ್ಸೇತುವೆ ಅಥವಾ ಕೆಳ ಸೇತುವೆಯಂತಹ ಮೂಲ ಸೌಕರ್ಯ ಆಯ್ಕೆಗಳನ್ನು ಪರಿಗಣಿಸಿ, ಸಂಭಾವ್ಯ ಪರಿಹಾರವನ್ನು ಹುಡುಕಬೇಕಾಗಿದೆ.


ಸವಣೂರಿನ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸ ಬೇಕೆನ್ನುವ ಬೇಡಿಕೆ ಹಳೆಯದ್ದು. ಬೇಡಿಕೆಯ ಬಗ್ಗೆ ಮೈಸೂರು ವಿಭಾಗೀಯ ರೈಲ್ವೆ ಅಧಿಕಾರಿಗಳಲ್ಲಿ ವಿಚಾರಿಸಿದರೆ, ಅಲ್ಲಿ ಯಾವುದೇ ಪ್ರಕ್ರಿಯೆಗಳ ನಡೆದ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಮೇ.30ಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಪರಿಶೀಲನೆ ಆಗದಿದ್ದಲ್ಲಿ ಮತ್ತೇ ಮಾಹಿತಿ ಹಕ್ಕಿನಲ್ಲಿ ಪಶ್ನಿಸಲಾಗುವುದು.

ಉಮೇಶ್ ಕುಮಾರಮಂಗಲ ಬೇರಿಕೆ

ಸವಣೂರು ಗೇಟ್‌ನಲ್ಲಿ ದಿನವಹಿ ವಾಹನ ಸಂಚಾರ ಹೆಚ್ಚು ಇರುವುದರಿಂದ ಮೇಲ್ಸೇತುವೆ ನಿರ್ಮಾಣವಾಗಬೇಕು. ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಎರಡು ಕಡೆ ಕಂದಾಯ ಹಾಗೂ ರೈಲ್ವೆ ಇಲಾಖೆಯವರಿಂದ ಸಮೀಕ್ಷೆ ನಡೆದಿದೆ. ಈ ರಸ್ತೆ ಮಡಿಕೇರಿ- ಧರ್ಮಸ್ಥಳ ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿಯಾಗುವುದರಿಂದ ಓವರ್ ಬ್ರಿಡ್ಜ್ ಕಾರ್ಯ ವಿಳಂಬವಾಗಿದೆ. ಆದರೆ ಈ ಯೋಜನೆ ಅಗತ್ಯವಾಗಿ ಅನುಷ್ಠಾನವಾಗಬೇಕಿದೆ.

ರಾಮಕೃಷ್ಣ ಪ್ರಭು ಸವಣೂರು ಸಾಮಾಜಿಕ ಮುಂದಾಳು

LEAVE A REPLY

Please enter your comment!
Please enter your name here