ವೈರಿಗಳ ಸಾವಿರ ಸಾವಿರ ಮಡದಿಯರ ಸಿಂಧೂರ ಅಳಿಸುವುದಕ್ಕೆ ಬದ್ದರಾಗಿ ನಿಂತವರು ನಾವೆಲ್ಲʼ – ಯಕ್ಷಗಾನಕ್ಕೂ ಬಂತು ʻಆಪರೇಷನ್‌ ಸಿಂಧೂರʼ : ವಿಡಿಯೋ ವೈರಲ್‌

0

ದಿನೇಶ್‌ ಶೆಟ್ಟಿ ಕಾವಳಕಟ್ಟೆಯವರು ದೇಶಪ್ರೇಮ ಸಾರುವ ಸಂಭಾಷಣೆಯನ್ನು ಹೇಳುವುದು ಇದೇ ಮೊದಲಲ್ಲ. ಅವರು ಅಭಿನಯಿಸಿರುವ ಪ್ರತಿಯೊಂದು ಪ್ರಸಂಗಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ದೇಶ ಪ್ರೇಮ, ದೇಶಭಕ್ತಿ ಸಾರುವ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಪರೋಕ್ಷವಾಗಿ ಬೆಂಬಲಿಸುವ ರೀತಿಯಲ್ಲಿ ಸಂಭಾಷಣೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ದಿನೇಶ್‌ ಶೆಟ್ಟಿಯವರು ತಮ್ಮದೇ ಆದ ಅಭಿಮಾನಿ ವೃಂದವನ್ನೂ ಹೊಂದಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರತ ನಡೆಸಿದ ಯುದ್ದ ಕಾರ್ಯಾಚರಣೆಗೆ ʻಆಪರೇಷನ್‌ ಸಿಂಧೂರʼ ಹೆಸರಿಡಲಾಗಿತ್ತು. ಈ ಹೆಸರು ಸೋಷಿಯಲ್‌ ಮೀಡಿಯಾಗಳಲ್ಲಿ ಟ್ರೆಂಡ್‌ ಆಗುತ್ತಿರುವಂತೆಯೇ ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲೂ ʻಆಪರೇಷನ್‌ ಸಿಂಧೂರʼ ದ ಸಂಭಾಷಣೆ ನಡೆದಿರುವ ವಿಡಿಯೋ ವೈರಲ್‌ ಆಗಿದೆ.

ಉಡುಪಿಯ ಪಾವಂಜೆ ಮೇಳದ ಯಕ್ಷಗಾನದಲ್ಲಿ ಭಾರತದ ʼಆಪರೇಷನ್ ಸಿಂಧೂರʼದ ಬಗ್ಗೆ ಕಲಾವಿದರ ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆದಿದೆ. ಈ ವಿಡಿಯೋವನ್ನು ಶಾಸಕ ಸುನಿಲ್ ಕುಮಾರ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋ ವೈರಲ್‌ ಆಗಿದೆ.

ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗದ ನಡುವೆ ಪ್ರಸಕ್ತ ವಿದ್ಯಮಾನಗಳ ಕುರಿತ ಜಾಗೃತಿ ಮತ್ತು ಸಾಮಾಜಿಕ ಸಂದೇಶ ನೀಡುವ ಹಾಗೂ ಹಾಸ್ಯಮಯ ಸಂಭಾಷಣೆಗಳು ನಡೆಯವುದು ಸಹಜ. ಇಂತಹ ಸಂಭಾಷಣೆಗಳಿಂದ ಕಲಾವಿದರೂ ಕಲಾಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಯಕ್ಷಗಾನ ರಂಗದಲ್ಲಿ ಸರ್ವೇ ಸಾಮಾನ್ಯವಾಗಿದೆ.

ಪಾವಂಜೆ ಮೇಳದ ಕಲಾವಿದ ದಿನೇಶ್‌ ಕಾವಳಕಟ್ಟೆಯವರು ಸಂಭಾಷಣೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಸುಬ್ರಹ್ಮಣ್ಯ ರಥಬೀದಿಯಲ್ಲಿ ʻವಧು ವೈಶಾಲಿನಿʼ ಎಂಬ ಯಕ್ಷಗಾನ ಪ್ರಸಂಗ ನಡೆಯುತ್ತಿತ್ತು. ಈ ಪ್ರಸಂಗದ ನಾಯಕ ʻಅವೀಕ್ಷಿತʼ ನ ವೇಷಧಾರಿಯಾಗಿದ್ದ ದಿನೇಶ್‌ ಶೆಟ್ಟಿ ಕಾವಳಕಟ್ಟೆ ಮತ್ತು ʻವೈಶಾಲಿನಿʼ ವೇಷಧಾರಿ ಅಕ್ಷಯ್‌ ಕುಮಾರ್‌ ಮಾರ್ನಾಡ್‌ ಮಧ್ಯೆ ಸಂಭಾಷಣೆ ನಡೆಯುತ್ತಿತ್ತು. ಈ ವೇಳೆ ʻಅವೀಕ್ಷಿತʼ (ದಿನೇಶ್‌ ಶೆಟ್ಟಿ) ಸಂಭಾಷಣೆಗೈಯುತ್ತಾ ʻಪವಿತ್ರವಾದ ನೆಲದಲ್ಲಿ ನಾ ಹುಟ್ಟಿದವ. ಪವಿತ್ರವಾದ ಸಂಸ್ಕಾರವನ್ನು ಪಡೆದವ. ಈ ನೆಲಕ್ಕೆ ತಾಯಿ ಅಂತ ನಾವು ಕರೆಯುತ್ತೇವೆ. ತಾಯಿ ಅಂತ ಕರೆಯುವ ನೆಲ ಇದ್ರೆ ಇದು ಬಿಟ್ರೆ ಇನ್ನೊಂದಿಲ್ಲ. ನಮಗೆ ಮಾತೃ ಗರ್ಭ ನಮಗೆ ದೇಶ ಪ್ರೇಮವನ್ನು ಕಲಿಸಿದೆ ಬಿಟ್ರೆ ದೇಶ ದ್ರೋಹ ಮಾಡುವುದನ್ನು ಕಲಿಸಲಿಲ್ಲʼ ಎನ್ನುತ್ತಾರೆ.

ಆಗ ʻವೈಶಾಲಿನಿʼ (ಅಕ್ಷಯ್‌ ಕುಮಾರ್)‌ ಈ ತಾಯಿಯ ʻಸಿಂಧೂರʼ ಅಳಿಸ್ಲಿಕ್ಕೆ ಬಂದ್ರೆ ಏನು ಮಾಡೋದು?ʼ ಎಂದು ಪ್ರಶ್ನಿಸುತ್ತಾರೆ. ಮತ್ತೆ ಮುಂದುವರಿದು ʻಅವೀಕ್ಷಿತʼ ʻ ಹಾ… ತಾಯಿಯ ಸಿಂಧೂರ ಅಳಿಸುತ್ತೇನೆ ಎಂದು ಬಂದ್ರೆ, ಈ ನೆಲದಲ್ಲಿ ಒಬ್ಬಳು ಹೆಣ್ಣಿನ ಸಿಂಧೂರ ಅಳಿಸಿದ್ರೆ ವೈರಿಗಳ ಸಾವಿರ ಸಾವಿರ ಮಡದಿಯರ ಸಿಂಧೂರ ಅಳಿಸುವುದಕ್ಕೆ ಬದ್ದರಾಗಿ ನಿಂತವರು ನಾವೆಲ್ಲʼ ಎನ್ನುತ್ತಾರೆ. ಮತ್ತೆ ಮುಂದುವರಿದು ʻಅವೀಕ್ಷಿತʼ ʻಒಬ್ಬ ಸುಹಾಸ ಬೀರುವವ ಹೋಗಿರಬಹುದು. ಆದರೆ ಪ್ರತಿಯೊಬ್ದರ ಅಂತರಂಗದಲ್ಲಿ ಸುಹಾಸ ಬೀರಿಸುವ ಸಾವಿರ ಸಾವಿರ ಸುಹಾಸರು ಮತ್ತೆ ಹುಟ್ಟಿ ಬರುವ ನೆಲವಿದುʼ ಎನ್ನುತ್ತಾರೆ. ಆಗ ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆಯ ಸುರಿಮಳೆ ಬರುತ್ತದೆ. ಸಂಭಾಷಣೆ ಹೀಗೆ ಮುಂದುವರಿಯುತ್ತದೆ.

ಹಾಗಂತ ದಿನೇಶ್‌ ಶೆಟ್ಟಿ ಕಾವಳಕಟ್ಟೆಯವರು ದೇಶಪ್ರೇಮ ಸಾರುವ ಸಂಭಾಷಣೆಯನ್ನು ಹೇಳುವುದು ಇದೇ ಮೊದಲಲ್ಲ. ಅವರು ಅಭಿನಯಿಸಿರುವ ಪ್ರತಿಯೊಂದು ಪ್ರಸಂಗಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ದೇಶ ಪ್ರೇಮ, ದೇಶಭಕ್ತಿ ಸಾರುವ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಪರೋಕ್ಷವಾಗಿ ಬೆಂಬಲಿಸುವ ರೀತಿಯಲ್ಲಿ ಸಂಭಾಷಣೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ದಿನೇಶ್‌ ಶೆಟ್ಟಿಯವರು ತಮ್ಮದೇ ಆದ ಅಭಿಮಾನಿ ವೃಂದವನ್ನೂ ಹೊಂದಿದ್ದಾರೆ. ಆದರೆ ʻಆಪರೇಷನ್‌ ಸಿಂಧೂರʼ ದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವಾಗಲೇ ಯಕ್ಷಗಾನದಲ್ಲಿ ಈ ಸಂಭಾಷಣೆ ನಡೆದಿರುವುದರಿಂದ ಯಕ್ಷಗಾನ ಪ್ರೇಮಿಗಳು ಮಾತ್ರವಲ್ಲದೇ, ಇತರರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸಂಭಾಷಣೆಯ ವಿಡಿಯೋ ಕೂಡಾ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

LEAVE A REPLY

Please enter your comment!
Please enter your name here