ಕಾವು ಪ್ರಾ.ಕೃ.ಪ.ಸ. ಸಂಘದ ಈಶ್ವರಮಂಗಲ ಶಾಖೆಯಲ್ಲಿ ಸದಸ್ಯ ಮತ್ತು ಗ್ರಾಹಕರ ಸಮಾವೇಶ-ಕೃಷಿ ಮಾಹಿತಿ ಕಾರ್ಯಾಗಾರ

0

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈಶ್ವರಮಂಗಲ ಶಾಖೆಯಲ್ಲಿ ಸಂಘದ ಸದಸ್ಯರ ಮತ್ತು ಗ್ರಾಹಕರ ಸಮಾವೇಶ ಹಾಗೂ ಕೃಷಿ ಮಾಹಿತಿ ಕಾರ್ಯಾಗಾರವು ಮೇ.13ರಂದು ಬೆಳಿಗ್ಗೆ ಈಶ್ವರಮಂಗಲ ಶಾಖೆಯ ಸಹಕಾರಿ ಸದನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ, ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರು ತಮ್ಮೆಲ್ಲಾ ವ್ಯವಹಾರವನ್ನು ಸಹಕಾರ ಸಂಘದ ಮೂಲಕವೇ ನಡೆಸಬೇಕು. ಸಂಘದ ಸದಸ್ಯರ, ಗ್ರಾಹಕರ ಕೃಷಿ ಬದುಕು ಉತ್ತಮವಾದಾಗ ಅಲ್ಲಿನ ಸಹಕಾರ ಸಂಘದ ಅಭಿವೃದ್ಧಿಯು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕಾವು ಸಹಕಾರ ಸಂಘವು ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ, ಇಂತಹ ಸಮಾವೇಶ, ಮಾಹಿತಿ ಕಾರ್ಯಕ್ರಮದಿಂದ ಸದಸ್ಯರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಸಂಘದ ಹಿರಿಯ ಸದಸ್ಯರು, ಕೃಷಿಕರೂ ಆಗಿರುವ ಮುಂಡ್ಯ ಶ್ರೀಕೃಷ್ಣ ಭಟ್‌ರವರು ಮಾತನಾಡಿ ಜನಪರ ಮತ್ತು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಉತ್ತಮ ರೀತಿಯಲ್ಲಿ ಮಾಡುತ್ತಿರುವ ಕಾವು ಸಹಕಾರ ಸಂಘವು ಗ್ರಾಹಕ ಸಮಾವೇಶದ ಮೂಲಕ ಸದಸ್ಯರಿಗೆ ಇನ್ನಷ್ಟು ಹತ್ತಿರವಾಗಿದೆ ಎಂದು ಹೇಳಿದರು.


ಪ್ರತಿ ಮನೆ ಭೇಟಿ ಮಾಡಲಿದ್ದೇವೆ-ನನ್ಯ
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ನಮ್ಮ ಸಂಘದಿಂದ ಗ್ರಾಹಕರಿಗೆ ಮತ್ತು ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆ, ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಗ್ರಾಹಕ ಸಮಾವೇಶ ಮತ್ತು ಕೃಷಿ ಮಾಹಿತಿಯನ್ನು ಸಂಘದ 3 ಶಾಖೆಯಲ್ಲೂ ಆಯೋಜನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ವರ್ಷಕೊಮ್ಮೆ ನಮ್ಮ ಸಂಘದ ಸಿಬ್ಬಂದಿಗಳು ಪ್ರತಿ ಸದಸ್ಯರ ಮನೆಗೆ ಭೇಟಿ ನೀಡಿ ಸಂಘದ ಸೌಲಭ್ಯವನ್ನು ತಲುಪಿಸಲಿದ್ದೇವೆ. ಆ ಮೂಲಕ ಸಂಘದಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿ ವ್ಯವಹಾರವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ದ.ಕ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರ ವಿಜ್ಞಾನಿ ಡಾ. ಕೇದಾರನಾಥ್‌ರವರು ಎಲೆಚುಕ್ಕಿ ರೋಗದ ನಿರ್ವಹಣೆ ಹಾಗೂ ರಸಗೊಬ್ಬರ ಸಮರ್ಪಕ ಬಳಕೆ ಬಗ್ಗೆ ಮಾಹಿತಿ ನೀಡಿದರು.


ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಮನವಿ:
ಸಂಘದ ಈಶ್ವರಮಂಗಲ ಶಾಖೆಯ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಅನುದಾನ ನೀಡುವಂತೆ ಮನವಿ ನೀಡಲಾಯಿತು. ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಮನವಿ ಹಸ್ತಾಂತರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿಯವರು ಮನವಿ ವಾಚಿಸಿದರು.


ಸಂಘದ ಸಿಬ್ಬಂದಿ ಶೋಭಾ ಕೆ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಈಶ್ವರಮಂಗಲ ಶಾಖಾ ಸಿಬ್ಬಂದಿ ಸಂದೇಶ್ ಕೆ ಕಾರ್ಯಕ್ರಮ ನಿರ್ವಹಿಸಿ, ಶಾಖಾ ವ್ಯವಸ್ಥಾಪಕ ರಾಜೇಶ್ ಡಿ ವಂದಿಸಿದರು. ಸಂಘದ ನಿರ್ದೇಶಕರುಗಳಾದ ಶಿವರಾಮ ಪಿ. ಈಶ್ವರಮಂಗಲ, ರಮೇಶ್ ಪೂಜಾರಿ ಮುಂಡ್ಯ, ಮೋಹನಾಂಗಿ ಬೀಜಂತ್ತಡ್ಕ, ಪ್ರಫುಲ್ಲಾ ಆರ್ ರೈ, ರಾಮಣ್ಣ ನಾಯ್ಕ ಕುದ್ರೋಳಿ, ನಹುಷ ಭಟ್ ಪಿ, ನವೀನ ಎನ್ ಸೇರಿದಂತೆ ಸಂಘದ ಸದಸ್ಯರುಗಳು, ಗ್ರಾಹಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here