ವರದಿ: ರಾಘವ ಶರ್ಮ ನಿಡ್ಲೆ
ಪುತ್ತೂರು: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹೊಸ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಿ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ್ದು, ನಿರೀಕ್ಷೆಯಂತೆ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಮತ್ತೊಮ್ಮೆ ಸಮಿತಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಇಂದು ಸುಬ್ರಹ್ಮಣ್ಯ ಶಬರಾಯ ಹಾಗೂ ಅವರ ನೇತೃತ್ವದ ತಂಡದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸೌತಡ್ಕ ದೇಗುಲದಲ್ಲಿ ನಡೆಯಲಿದೆ.
ವ್ಯವಸ್ಥಾಪನಾ ಸಮಿತಿಗೆ ನೇಮಕಗೊಂಡ ಸದಸ್ಯರಲ್ಲಿ ಪರಿಶಿಷ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪಾರಪಳಿಕೆ ಕೊಕ್ಕಡ, ಮಹಿಳಾ ಸ್ಥಾನದಿಂದ ಸಿನಿ ಗುರುದೇವನ್, ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿ, ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ರೆಖ್ಯ, ಪ್ರಶಾಂತ್ ಕುಮಾರ್ ಕೊಕ್ರಾಡಿ ಹಾಗೂ ಪ್ರಧಾನ ಅರ್ಚಕ ಸತ್ಯಪ್ರಿಯ ಸೇರಿ ಒಟ್ಟು 9 ಮಂದಿ ಇರಲಿದ್ದಾರೆ.
ವ್ಯವಸ್ಥಾಪನಾ ಸಮಿತಿಗೆ ಸಂಬಂಧಿಸಿ ಮಾರ್ಚ್ 3ರ ಆದೇಶವನ್ನೇ ಪುನಾರವರ್ತಿಸಿರುವ ರಾಜ್ಯ ಸರ್ಕಾರ, ಅಂದು ಆಯ್ಕೆ ಮಾಡಿದ್ದ ಸದಸ್ಯರನ್ನೇ ಮರು ಆಯ್ಕೆ ಮಾಡಿದೆ. ವಾಸ್ತವದಲ್ಲಿ, ಎರಡನೇ ಆದೇಶ ಹೊರಬಿದ್ದ ಮಾರನೇ ದಿನವೇ ಸುಬ್ರಹ್ಮಣ್ಯ ಶಬರಾಯರು ಹಾಗೂ ಅವರ ತಂಡ ಸೌತಡ್ಕ ದೇವಸ್ಥಾನದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಸಮ್ಮುಖದಲ್ಲಿ ಅಽಕಾರ ಸ್ವೀಕಾರ ಮಾಡಿತ್ತು. ಆದರೆ, ಎರಡನೇ ಆದೇಶದಲ್ಲಿ ತಮ್ಮನ್ನು ಸದಸ್ಯತ್ವದಿಂದ ಕೈಬಿಟ್ಟದ್ದಕ್ಕಾಗಿ ಪುತ್ತೂರು ಮೂಲದ ವಕೀಲ ಉದಯ ಶಂಕರ ಅರಿಯಡ್ಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಉದಯ ಶಂಕರ ಅರಿಯಡ್ಕ ಮತ್ತು ಪ್ರಶಾಂತ್ ರೈ ಗೋಳಿತೊಟ್ಟು ಅವರನ್ನು ಕೈಬಿಟ್ಟಿದ್ದ ಸರ್ಕಾರ, ಪ್ರಶಾಂತ್ ಪೂಜಾರಿ ಮತ್ತು ಪ್ರಮೋದ್ ಕುಮಾರ್ ಶೆಟ್ಟಿ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು.
ಈ ಇಬ್ಬರನ್ನು ಸಮಿತಿಯಿಂದ ತೆಗೆಯಲು ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರೇ ನೇರ ಕಾರಣ ಎಂದು ಉದಯ ಶಂಕರ ಅರಿಯಡ್ಕ ಮತ್ತು ಪ್ರಶಾಂತ್ ರೈ ಆರೋಪ ಮಾಡಿದ್ದರು. ಹೈಕೋರ್ಟ್ನಲ್ಲಿ ಉದಯ ಶಂಕರ ಅರಿಯಡ್ಕ ಅವರು ಮೇಲುಗೈ ಸಾಽಸಿ, ೨ನೇ ಬಾರಿಗೆ ಸರ್ಕಾರ ರಚಿಸಿದ್ದ ಸಮಿತಿ ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ, ತಮಗಾದ ಅವಮಾನವನ್ನು ಅವರು ಕಾನೂನಾತ್ಮಕವಾಗಿ ಸರಿಪಡಿಸಿಕೊಂಡಿದ್ದರು. ಹೈಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿದ್ದು ಕೂಡ ಹೌದು.
ಉದಯ ಶಂಕರ ಶೆಟ್ಟಿ ಮತ್ತು ಪ್ರಶಾಂತ್ ರೈ ಬೆಳ್ತಂಗಡಿ ತಾಲೂಕಿನವರಲ್ಲ. ಹೀಗಾಗಿ ಕೈಬಿಡಲಾಯಿತು. ಯಾರನ್ನೂ ಅವಮಾನ ಮಾಡಲು ಹೀಗೆ ಮಾಡಿಲ್ಲ. ಹೊಸ ಉತ್ಸಾಹಿ ತಂಡ ಕಟ್ಟುವುದು ನಮ್ಮ ಆಶಯ ಎಂದು ತಾಲೂಕು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಮರ್ಥನೆ ನೀಡಿದ್ದರು. ಮಾ.೩ರ ಆದೇಶದಂತೆ ಮತ್ತು ರಕ್ಷಿತ್ ಶಿವರಾಂ ಅವರ ಇಚ್ಛೆಯಂತೆಯೇ ಅದೇ ತಂಡ ಮತ್ತೊಮ್ಮೆ ಸೌತಡ್ಕ ದೇಗುಲದ ವ್ಯವಹಾರಗಳನ್ನು ನೋಡಿಕೊಳ್ಳಲು ಸಜ್ಜಾಗಿದೆ.
ಹೈಕೋರ್ಟ್ ಮುಂದೆ ಒಪ್ಪಿತ್ತು:
ಸಮಿತಿ ಕುರಿತ ಫೆ.18ರ ಮೊದಲ ಸರ್ಕಾರಿ ಆದೇಶದ ಕುರಿತು ಹೈಕೋರ್ಟ್ಗೆ ವಿವರಣೆ ನೀಡಿದ್ದ ಸರ್ಕಾರಿ ವಕೀಲರು, ಅದು ಕರಡು ಪ್ರತಿ ಮಾತ್ರ. ಅಧಿಕೃತ ಆದೇಶವಾಗಿರಲಿಲ್ಲ ಎಂದು ತಿಳಿಸಿದ್ದರು. ಇದನ್ನು ಪ್ರಶ್ನಿಸಿದ್ದ ನ್ಯಾ. ನಾಗಪ್ರಸನ್ನ, ಕೇವಲ ಕರಡು ಪ್ರತಿ ಎನ್ನುವುದಾದರೆ, ಅದು ಪ್ರಕಟವಾಗಿದ್ದು ಹೇಗೆ? ಪತ್ರಿಕೆಗಳಲ್ಲಿ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಹೊಸದಾಗಿ ಸಮಿತಿ ಮಾಡಬೇಕು ನ್ಯಾಯಮೂರ್ತಿಗಳ ಸಲಹೆ ಒಪ್ಪಿಕೊಂಡಿದ್ದ ಪ್ರತಿವಾದಿ ಸರ್ಕಾರಿ ವಕೀಲರು, ಸದಸ್ಯತ್ವಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಹೊಸ ವ್ಯವಸ್ಥಾಪನಾ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದರು.
3ನೇ ಬಾರಿಗೆ ಅವಕಾಶ:
ಸುಬ್ರಹ್ಮಣ್ಯ ಶಬರಾಯರಿಗೆ ಸೌತಡ್ಕ ವ್ಯವಸ್ಥಾಪನಾ ಸಮಿತಿಗೆ ಮೂರನೇ ಬಾರಿಗೆ ಅಧ್ಯಕ್ಷರಾಗುವ ಅವಕಾಶ ಒಲಿದು ಬಂದಿರುವುದು ಗಮನಾರ್ಹ. ಈ ಹಿಂದೆ 2017-20ರ ನಡುವಿನ ಅವಽಗೆ ಅವರು ಅಧ್ಯಕ್ಷರಾಗಿದ್ದರು. ನಂತರ, 2025ರ ಮಾರ್ಚ್ 3ರ ಆದೇಶದನ್ವಯ ಅಧಿಕಾರ ಸ್ವೀಕರಿಸಿ ಒಂದು ದಿನಕ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಆದರೆ, ಹೈಕೋರ್ಟ್ ಆದೇಶದಿಂದಾಗಿ ಅವರಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಈಗ ಮೂರನೇ ಬಾರಿಗೆ ಅವರಿಗೆ ಅವಕಾಶ ಸಿಕ್ಕಿದ್ದು, ಮುಂದಿನ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಬಹುಪಾಲು ಖಚಿತವಾಗಿದೆ.
ಮತ್ತೆ ಕೋರ್ಟ್ಗೆ ಸಾಧ್ಯವಿದೆಯೇ?
ಮಾರ್ಚ್ 3ರ ಆದೇಶ ಪ್ರಶ್ನಿಸಿ ಕೋರ್ಟ್ಗೆ ಹೋಗಲು ಅಂದು ಉದಯ ಶಂಕರ ಅರಿಯಡ್ಕ ಅವರ ಮುಂದೆ ಆಯ್ಕೆಗಳಿದ್ದವು. ಆದರೆ, ನಂತರದಲ್ಲಿ ಹೊಸ ಸಮಿತಿ ಮಾಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ, ಸರ್ಕಾರ ತನ್ನ ವಿವೇಚನೆ ಮೇರೆಗೆ ಈಗ ಹೊಸದಾದ ಸಮಿತಿ ರಚನೆ ಮಾಡಿದೆ. ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವ ಅವಕಾಶ ಕಡಿಮೆ. ಸಮಿತಿಯಲ್ಲಿರುವವರ ಮೇಲೆ ಏನೇ ಆರೋಪಗಳಿದ್ದರೂ, ಅದು ನ್ಯಾಯಾಂಗದ ಅಂಗಳದಲ್ಲಿ ಸಾಬೀತಾಗಿಲ್ಲ. ಹೀಗಾಗಿ, ಇಂದು ಅಽಕಾರ ಸ್ವೀಕಾರ ಮಾಡಲಿರುವ ಸಮಿತಿಗೆ ಕಾನೂನಿನ ಅಡಚಣೆಗಳು ಬರುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ. ಏತನ್ಮಧ್ಯೆ, ತಮ್ಮ ಮೇಲೆ ಗಂಟೆ ಹಗರಣದ ಆರೋಪ ಮಾಡಿದ್ದ ಎದುರಾಳಿ ತಂಡದ ಸದಸ್ಯರ ವಿರುದ್ಧ ಸುಬ್ರಹ್ಮಣ್ಯ ಶಬರಾಯ ನೇತೃತ್ವದ ತಂಡ ಮಾನಹಾನಿ ಕೇಸು ದಾಖಲಿಸಿ, ಕಾನೂನು ಹೋರಾಟಕ್ಕೆ ಮುಂದಾಗಿದೆ.
“ಎದುರಾಳಿಗಳು ನಮ್ಮ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ, ರಾಜ್ಯ ಸರ್ಕಾರ ನಮ್ಮ ಮೇಲೆ ವಿಶ್ವಾಸ ಕಳೆದುಕೊಳ್ಳಲಿಲ್ಲ. ಸೌತಡ್ಕ ದೇಗುಲದಲ್ಲಿ ಕೆಲಸ ಮಾಡುವ ಮತ್ತೊಂದು ಅವಕಾಶ ಸಿಕ್ಕಿದೆ. ಇದಕ್ಕಾಗಿ ಸರ್ಕಾರದ ಎಲ್ಲರಿಗೂ ಧನ್ಯವಾದಗಳು”
-ಸುಬ್ರಹ್ಮಣ್ಯ ಶಬರಾಯ
ಮಾಜಿ ಅಧ್ಯಕ್ಷ, ಹೊಸ ಸಮಿತಿ ಸದಸ್ಯರು