ಪುತ್ತೂರು: ಇನ್ನೇನು ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂಗಾರು ಮಳೆ ಆಗಮನಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಮುಂಗಾರು ಸಂದರ್ಭದಲ್ಲಿ ಪ್ರಾಣಾಪಾಯಕ್ಕೆ ಕಾರಣವಾಗುತ್ತಿರುವ ಸಿಡಿಲು ಹೊಡೆತದ ಅಪಾಯ ತಪ್ಪಿಸುವ ಯೋಜನೆಯೇ ಹಾದಿ ತಪ್ಪಿದೆ. ಕಳೆದ ವರ್ಷ ಜಿಲ್ಲೆಯ ಸಿಡಿಲು ಬಾಧಿತ ಪ್ರದೇಶಗಳಲ್ಲಿ ಪ್ರಥಮ ಆದ್ಯತೆಯಲ್ಲಿ ಮಿಂಚು ಬಂಧಕಗಳನ್ನು ಅಳವಡಿಸಲು ತೀರ್ಮಾನಿಸಲಾಗಿತ್ತು. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಈ ಕುರಿತು ನಿರ್ದೇಶನವನ್ನು ನೀಡಿದ್ದರು. ಈ ಕುರಿತು ಕಳೆದ ವರ್ಷ ಜೂ.10ರಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲೇ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಆ ಬಳಿಕ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಅನುಮೋದನೆ ಸಿಕ್ಕದ ಕಾರಣ ಮಿಂಚುಬಂಧಕ ಯೋಜನೆ ಮೂಲೆಗುಂಪಾಗಿದೆ. ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಅತಿ ಹೆಚ್ಚು ಸಿಡಿಲು ಬಾಧಿತ ಜಿಲ್ಲೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರವೇ ಒಪ್ಪಿಕೊಂಡಿದೆ. ಸಿಡಿಲಿನಿಂದ ಜೀವಹಾನಿ, ಸಾರ್ವಜನಿಕ ಆಸ್ತಿ ಹಾನಿ ಇತ್ಯಾದಿ ಇರುವ ಕಾರಣ ಮಿಂಚು ಬಂಧಕಗಳ ಯೋಜನೆಯನ್ನು ರೂಪಿಸಲಾಗಿತ್ತು. ಇದಕ್ಕಾಗಿ ಪದೇ ಪದೇ ಸಿಡಿಲು ಆಘಾತಕ್ಕೆ ಒಳಗಾಗುವ ಸ್ಥಳಗಳನ್ನು ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳು ಗುರುತಿಸಿ ಪಟ್ಟಿ ಮಾಡಿದ್ದರು. ಸುಮಾರು 40ಕ್ಕೂ ಅಧಿಕ ಜಾಗಗಳಲ್ಲಿ ಮಿಂಚು ಬಂಧಕ ಅಳವಡಿಸುವುದಕ್ಕೆ ಪ್ರಸ್ತಾವನೆ ಹೋಗಿದೆ. ಮಿಂಚು ಬಂಧಕ ಅಳವಡಿಕೆ ಮಾಡುವವರನ್ನೇ ಕರೆದು ಅವರಿಂದ ಈ ಕುರಿತ ಕೊಟೇಶನ್ ಪಡೆಯಲಾಗಿತ್ತು. ಅದರಂತೆ ಒಂದು ಮಿಂಚು ಪ್ರತಿಬಂಧಕಕ್ಕೆ ೩-೫ ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.
ಕಾರ್ಯಸಾಧ್ಯವಲ್ಲ
ಲಭ್ಯ ಮಾಹಿತಿ ಪ್ರಕಾರ ಈ ರೀತಿ ಮಿಂಚು ಬಂಧಕ ಅಳವಡಿಸುವುದು ದ.ಕ. ಜಿಲ್ಲೆಯಲ್ಲಿ ಕಾರ್ಯಸಾಧ್ಯವಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಪ್ರಸ್ತಾವನೆಯನ್ನೇ ತಿರಸ್ಕರಿಸಿದೆ. ಮಿಂಚು ಬಂಧಕಗಳು ಹೆಚ್ಚೆಂದರೆ ಒಂದೆರಡು ಕಟ್ಟಡಗಳಿಗೆ ಮಾತ್ರ ರಕ್ಷಣೆ ಒದಗಿಸಬಹುದು, ಅದಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡುವುದು ಬೇಕಿಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಬಂದ ಕಾರಣ ಯೋಜನೆ ಮುಂದುವರಿದಿಲ್ಲ.
ಸಿಡಿಲು ಬಾಧಿತ ಪ್ರದೇಶಗಳು
1. ಮಂಗಳೂರು: ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಆಸುಪಾಸು
2. ಮೂಲ್ಕಿ: ಐಕಳ ಹಾಗೂ ಏಳಿಂಜೆ
3. ಮೂಡುಬಿದಿರೆ: ಕರಿಂಜೆ, ಕಲ್ಲಬೆಟ್ಟು, ಪಡುಕೊಣಾಜೆ,ವಾಲ್ಪಾಡಿ, ಶಿರ್ತಾಡಿ, ನೆಲ್ಲಿಕಾರು, ಬೆಳುವಾಯಿ, ಮಾಂಟ್ರಾಡಿ.
4. ಬಂಟ್ವಾಳ: ವೀರಕಂಭ, ಕೊಳ್ತಾಡು, ಕನ್ಯಾನ, ಅಮ್ಮುಂಜೆ, ಅಜ್ಜಿಬೆಟ್ಟು, ಸಂಗಬೆಟ್ಟು, ಅಮಾಡಿಡಿ, ನಾವೂರು.
5. ಉಳ್ಳಾಲ: ಉಳ್ಳಾಲ, ಇರಾ, ಅಂಬ್ಲಿಮೊಗರು, ಪಾವೂರು.
6. ಪುತ್ತೂರು: ಕೆಯ್ಯೂರು, ಬಿರುಮಲೆ ಬೆಟ್ಟ, ಪುತ್ತೂರು ನಗರ.
7. ಕಡಬ: ಸುಬ್ರಹ್ಮಣ್ಯ ಗ್ರಾಮದ ಆಸುಪಾಸು, ನೆಲ್ಯಾಡಿ ಗ್ರಾಮದ ಆಸುಪಾಸು, ಸವಣೂರು ಆಸುಪಾಸು ಹಾಗೂ ಕಡಬ ಪರಿಸರ.
8. ಬೆಳ್ತಂಗಡಿ: ಬೆಳ್ತಂಗಡಿ ಕಸಬಾ, ಕುವೆಟ್ಟು, ಓಡಿಲಾಳ ಗ್ರಾಮಗಳ ಆಸುಪಾಸು, ಕೊಕ್ಕಡ ಹೋಬಳಿಯ ನ್ಯಾಯತರ್ಪು ಹಾಗೂ ಮಚ್ಚಿನ ಆಸುಪಾಸು., ವೇಣೂರು ಹೋಬಳಿಯ ಪಿಲ್ಯ, ಬಳಂಜ ಮತ್ತು ತೆಂಕಕಾರಂದೂರು ಆಸುಪಾಸು.
9.ಸುಳ್ಯ: ಸುಳ್ಯ ಆಸುಪಾಸು, ಸಂಪಾಜೆ, ನೆಲ್ಲೂರು ಕೆಮ್ರಾಜೆ, ಕಲ್ಮಡ್ಕ, ಕೊಲ್ಲಮೊಗರು.
ದ.ಕ ಅತೀ ಹೆಚ್ಚು ಸಿಡಿಲು ಬಾಧಿತ ಜಿಲ್ಲೆ
ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಸಿಡಿಲು ಬಾಧಿತ ಜಿಲ್ಲೆ ಎಂದು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರವೇ ಒಪ್ಪಿಕೊಂಡಿತ್ತು. ಪ್ರತಿ ವರ್ಷದ ಮಳೆಗಾಲದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿಲಿನಿಂದಾಗಿ ಹಲವು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಸಿಡಿಲಿನಿಂದ ಜೀವ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಮಿಂಚು ಬಂಧಕ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದರು. ಆದರೆ ಇದೀಗ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರವೇ ಪ್ರಸ್ತಾವನೆಯನ್ನು ತಿರಸ್ಕರಿಸಿ ಮಿಂಚು ಬಂಧಕ ಜಿಲ್ಲೆಯಲ್ಲಿ ಕಾರ್ಯಸಾಧುವಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದೆ.
‘ಮಿಂಚು ಸಮಸ್ಯೆಗೆ ಜನರೇ ಜಾಗರೂಕರಾಗಿರಬೇಕು, ಆದಷ್ಟೂ ಕಟ್ಟಡದ ಒಳಗಡೆ ಇದ್ದರೆ ಪ್ರಾಣಹಾನಿ ತಪ್ಪಿಸಬಹುದು. ಮಿಂಚು ಬಂಧಕ ನಮ್ಮಲ್ಲಿ ಕಾರ್ಯಸಾಧುವಲ್ಲ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರ ಹೇಳಿರುವ ಹಿನ್ನೆಲೆಯಲ್ಲಿ ಅದನ್ನು ಮುಂದುವರಿಸಲಾಗಿಲ್ಲ.’
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.