ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ 15 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ವಿತರಣೆ
ಪುತ್ತೂರು: ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ವತಿಯಿಂದ ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷ ಮನ್ಮಿತ್ ರೈ ಒಲೆಮುಂಡೋವು ಇವರ ಜನ್ಮ ದಿನದ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗೌರವ ಧನ ವಿತರಣಾ ಕಾರ್ಯಕ್ರಮವು ಮೇ.11 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರರವರು ಮಾತನಾಡಿ, ನಮ್ಮ ಬಳಗದ ಗೌರವಾಧ್ಯಕ್ಷ ಮನ್ಮಿತ್ ರೈ ಓಲೆಮುಂಡೋವುರವರು ತಮ್ಮ ಹುಟ್ಟು ಹಬ್ಬವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ. ಹುಟ್ಟು ಹಬ್ಬಕ್ಕಾಗಿ ದುಂದುವೆಚ್ಚ ಮಾಡುವ ಬದಲು ಇಂತಹ ಸಮಾಜಮುಖಿ ಕಾರ್ಯಕ್ರಮದ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರೆ ಅದಕ್ಕೊಂದು ಅರ್ಥ ಬರುತ್ತದೆ. ಮನ್ಮಿತ್ ರೈಯವರ ಜೀವನ ಸುಖ,ಶಾಂತಿ,ನೆಮ್ಮದಿಯಿಂದ ಕೂಡಿರಲಿ ಭಗವಂತನ ಆಶೀರ್ವಾದ ಅವರ ಮೇಲಿರಲಿ ಎಂದು ಹೇಳಿ ಹುಟ್ಟುಹಬ್ಬದ ಶುಭಾಶಯದೊಂದಿಗೆ ಶುಭ ಹಾರೈಸಿದರು.
ಮನ್ಮಿತ್ ರೈ ಒಲೆಮುಂಡೋವುರವರ ತಾಯಿ ಮೀರಾ ಮೋಹನ್ ರೈ ಒಲೆಮುಂಡೋವುರವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸಿ ಶುಭ ಹಾರೈಸಿದರು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿದ ಮೀರಾ ಮೋಹನ್ ರೈ ಓಲೆಮುಂಡೋವುರವರನ್ನು ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷರು, ಉದ್ಯಮಿ, ಕೊಡುಗೈ ದಾನಿ ಮೋಹನ್‌ದಾಸ್ ರೈ ಕುಂಬ್ರ ಮತ್ತು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಹುಟ್ಟು ಹಬ್ಬದ ಶುಭಾಶಯದೊಂದಿಗೆ ಶುಭ ಹಾರೈಸಿದರು. ಸ್ಪಂದನಾ ಸೇವಾ ಬಳಗ ದ ಕಾರ್ಯಧ್ಯಕ್ಷ ಅಶೋಕ್ ತ್ಯಾಗರಾಜನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಬಳಗದ ಗೌರವ ಸಲಹೆಗಾರ ತಿಲಕ್ ರೈ ಕುತ್ಯಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಷಾ ನಾರಾಯಣ ಗೌಡ ಪ್ರಾರ್ಥಿಸಿದರು. ಯುವರಾಜ್ ಪೂಂಜ ವಂದಿಸಿದರು. ಶರತ್ ಗೌಡ ಗುತ್ತು ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಸ್ಪಂದನಾ ಸೇವಾ ಬಳಗದ ಗೌರವ ಸಲಹೆಗಾರ ಸುಧಾಕರ್ ರೈ ಕುಂಬ್ರ, ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ ,ಚಂದ್ರ ಇದ್ಪಾಡಿ, ಸಂಚಾಲಕ ಮಹೇಶ್ ಕೇರಿ, ಸದಸ್ಯರಾದ ಭಾರತಿ ಅರಿಯಡ್ಕ, ವಿದ್ಯಾಲತಾ ರೈ ,ಮಲ್ಲಿಕಾ ಸುಂದರ್ ರೈ, ತೃಪ್ತಿ ರತನ್ ರೈ, ನಿಮಿತಾ ರೈ, ಶಿಲ್ಪಾ ನಿತಿನ್ ರೈ, ನಾರಾಯಣ ಪೂಜಾರಿ ಕುರಿಕ್ಕಾರ, ಎಸ್. ಮಾಧವ ರೈ ಕುಂಬ್ರ, ಪದ್ಮನಾಭ ಆಚಾರ್ಯ, ಪದ್ಮನಾಭ ಗೌಡ ಮುಂಡಾಲ, ಗಣೇಶ್ ಶೇಖಮಲೆ, ಪ್ರದೀಪ್ ಅಜಲಡ್ಕ, ಅರುಣ್ ರೈ ಬಿಜಲ, ನೇಮಿರಾಜ್ ರೈ ಕುರಿಕ್ಕಾರ , ರಾಜ್‌ಪ್ರಕಾಶ್ ರೈ ಕುಂಬ್ರ ಹಾಗೇ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
3 ಗ್ರಾಮದ 15 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ
ಮನ್ಮಿತ್ ರೈ ಓಲೆಮುಂಡೋವುರವರ ಹುಟ್ಟು ಹಬ್ಬದ ಅಂಗವಾಗಿ ಒಳಮೊಗ್ರು, ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮದ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ಒಟ್ಟು 15 ಮಂದಿ ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರದಂತೆ ಸಹಾಯಧನ ವಿತರಿಸಲಾಯಿತು.
ವಿದೇಶದಲ್ಲಿ ಉದ್ಯಮ ನಡೆಸುತ್ತಿರುವ ಮನ್ಮಿತ್ ರೈ ಓಲೆಮುಂಡೋವುರವರು ಪ್ರತಿವರ್ಷದಂತೆ ಈ ವರ್ಷವೂ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತನ್ನಿಂದ ಸಮಾಜಕ್ಕೆ ಏನಾದರೂ ಪ್ರಯೋಜನವಾಗಬೇಕು ಎಂಬ ಬಗ್ಗೆ ಚಿಂತನೆ ನಡೆಸುವ ಇವರು ಕೊರೋನ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಆಹಾಯ ಕಿಟ್‌ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.