ಪುತ್ತೂರು:ರಸ್ತೆ ಬದಿ ನಿಂತಿದ್ದ ಶಾಮಿಯಾನದ ಲಾರಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ಮೇ.18ರಂದು ರಾತ್ರಿ ಮಾಣಿ ಮೈಸೂರು ರಾಷ್ಟ್ರ್ರೀಯ ಹೆದ್ದಾರಿಯಲ್ಲಿ ಪುತ್ತೂರು ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ನಡೆದಿದೆ.

ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ ಸುದೀಪ್ ಚೊಕ್ಕಾಡಿ(38ವ.)ಮೃತಪಟ್ಟವರು.ನೇರಳಕಟ್ಟೆಯಲ್ಲಿರುವ ತಂಗಿ ಮನೆಯಲ್ಲಿ ನಡೆಯಲಿದ್ದ ಅಗೇಲು ಸೇವೆ ಕಾರ್ಯಕ್ರಮಕ್ಕೆ ಹೋಗಲೆಂದು ಅವರು ದೇವಸ್ಯ ತನ್ನ ಮನೆಯಿಂದ ಹೊರಟು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಮುರದಲ್ಲಿ ಖಾಸಗಿ ಆಯುರ್ವೇದಿಕ್ ಉತ್ಪನ್ನಗಳ ಮಾರ್ಕೆಟಿಂಗ್ ಪ್ರತಿನಿಽಯಾಗಿ ಕೆಲಸ ನಿರ್ವಹಿಸುತ್ತಿದ್ದ ಸುದೀಪ್ ಅವರು ತಾಯಿ ಮತ್ತು ವಿಶೇಷಚೇತನ ಸಹೋದರನೊಂದಿಗೆ ದೇವಸ್ಯದಲ್ಲಿ ವಾಸ್ತವ್ಯ ಹೊಂದಿದ್ದರು.
ಅಗೇಲು ಸೇವೆಗೆಂದು ತಂಗಿ ಮನೆಗೆ ಹೊರಟಿದ್ದರು:
ಮೇ.18ರಂದು ಸಂಜೆ ದೇವಸ್ಯ ಮನೆಗೆ ಬಂದಿದ್ದ ಸುದೀಪ್‌ರವರು ಮನೆಯಲ್ಲಿ ಕಲ್ಲುರ್ಟಿ ದೈವಕ್ಕೆ ದೀಪವಿಟ್ಟು ಬಳಿಕ ನೇರಳಕಟ್ಟೆಯಲ್ಲಿರುವ ತಂಗಿ ಮನೆಯಲ್ಲಿ ರಾತ್ರಿ ನಡೆಯಲಿದ್ದ ಅಗೇಲು ಕಾರ್ಯಕ್ರಮಕ್ಕೆಂದು ಮನೆಯಿಂದ ಹೊರಟು ಬಂದವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಪಾಸ್ ರಸ್ತೆ ಉರ್ಲಾಂಡಿ ಸಮೀಪ ಡಾಮಾರು ರಸ್ತೆಗೆ ತಾಗಿಕೊಂಡು ನಿಂತಿದ್ದ, ವಿಜಯ ಶಾಮಿಯಾನ ಸಂಸ್ಥೆಗೆ ಸೇರಿದ ಲಾರಿಗೆ ಅವರ ಬೈಕ್ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಕಬ್ಬಿಣದ ಸರಳು,ಇತರ ಸಲಕರಣೆಗಳು ಸುದೀಪ್ ಅವರ ತಲೆ, ಎದೆ, ಹೊಟ್ಟೆ ಭಾಗಕ್ಕೆ ತಾಗಿದ್ದರಿಂದ ಗಂಭೀರ ಗಾಯಗೊಂಡಿದ್ದರು.ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.ಅವಿವಾಹಿತರಾಗಿದ್ದ ಮೃತರು ತಾಯಿ ಮೋಹಿನಿ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಮುನ್ನೆಚ್ಚರಿಕೆ ಬೆಳಕಿಲ್ಲದೆ ನಿಂತಿದ್ದ ಲಾರಿ:
ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ವಾಹನ ನಿಲ್ಲಿಸುವಾಗ ಮುನ್ನೆಚ್ಚರಿಕೆ ಬೆಳಕು ಹಾಕಬೇಕೆಂಬ ನಿಯಮವಿದ್ದರೂ ಅಪಘಾತದ ಸ್ಥಳದಲ್ಲಿದ್ದ ಲಾರಿಯ ಹಿಂಬದಿಯಲ್ಲಿ ಯಾವುದೇ ಮುನ್ನೆಚ್ಚರಿಕೆ ಬೆಳಕಿರಲಿಲ್ಲ.ಜೊತೆಗೆ ಕಬ್ಬಿಣದ ಸಲಕರಣೆ, ತಗಟು ಶೀಟ್‌ಗಳು ಲಾರಿಯ ಹೊರಗಡೆಗೆ ಚಾಚಿತ್ತು.ಲಾರಿ ನಿಲುಗಡೆಯಾಗಿರುವ ಕುರಿತು ಯಾವುದೇ ರಿಪ್ಲೆಕ್ಟರ್ ಅಳವಡಿಸದೇ ಇರುವುದು ಮತ್ತು ತುಂತುರು ಮಳೆಯೂ ಬರುತ್ತಿದ್ದುದರಿಂದ ಬೈಕ್ ಸವಾರನಿಗೆ ಲಾರಿ ನಿಂತಿರುವುದು ಸ್ಪಷ್ಟವಾಗಿ ಕಾಣದೆ ಇರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳದಲ್ಲಿದ್ದವರು ಹೇಳಿಕೊಳ್ಳುತ್ತಿದ್ದರು.
ಚಿತ್ರನಟ ಸುದೀಪ್ ಅಭಿಮಾನಿಯಾಗಿ ತನ್ನ ಹೆಸರನ್ನೂ ಬದಲಾಯಿಸಿಕೊಂಡಿದ್ದರು
ಮೂಲತಃ ಬಿಳಿಯೂರು ಗ್ರಾಮದ ಕರ್ವೇಲು ನಿವಾಸಿಯಾಗಿದ್ದ ಸುಧಿಶ್ ಅವರು ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದರು.ಆ ವೇಳೆ ಚುರುಕಿನ ವಿದ್ಯಾರ್ಥಿಯಾಗಿದ್ದರು.ಚಿತ್ರನಟ ಸುದೀಪ್ ಅವರ ಕಟ್ಟಾ ಅಭಿಮಾನಿ ಯಾಗಿದ್ದ ಸುಧಿಶ್ ಅವರು, ಬಳಿಕ ತನ್ನ ಹೆಸರನ್ನೂ ಸುದೀಪ್ ಎಂದು ಬದಲಾಯಿಸಿಕೊಂಡಿದ್ದರು.ತನ್ನ ವಾಟ್ಸಾಪ್ ಮತ್ತು ಫೆಸ್ಬುಕ್ ಖಾತೆಯಲ್ಲಿ ಹೆಚ್ಚಾಗಿ ಸುದೀಪ್ ಅವರೊಂದಿಗಿನ ತನ್ನ ಭಾವಚಿತ್ರವನ್ನು ಹಾಕಿಕೊಳ್ಳುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲಾ ‘ಕಿಚ್ಚ ಸುದೀಪ್ ಅಭಿಮಾನಿ ಬಳಗ’ದ ಸ್ಥಾಪಕಾಧ್ಯಕ್ಷರೂ ಆಗಿದ್ದರು.