ಕೆಯ್ಯೂರು ಗ್ರಾ.ಪಂ. ಮಹಿಳಾ ವಿಶೇಷ ಗ್ರಾಮಸಭೆ, ಸನ್ಮಾನ

0

ಪೋಕ್ಸೋ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ದುರಂತ: ಹರಿಣಾಕ್ಷಿ

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಿಂದಾಗಿ ಪೋಕ್ಸೋದಂತಹ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ಬೆಳವಣಿಗೆಯಾಗಿದೆ. ಕಿಶೋರಿಯರ ಬಗ್ಗೆ ಪ್ರತಿಯೊಬ್ಬ ಹೆತ್ತವರು ಕಾಳಜಿ ವಹಿಸಿಕೊಳ್ಳಬೇಕಾದ ಅಗತ್ಯತೆ ತುಂಬಾ ಇದೆ. ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆ ಪೋಷಕರು ಚಿಂತನೆ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಹರಿಣಾಕ್ಷಿಯವರು ಹೇಳಿದರು.


ಅವರು ಕೆಯ್ಯೂರು ಗ್ರಾಮ ಪಂಚಾಯತ್‌ನ ಮಹಿಳಾ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು. ಸಭೆಯು ಮೇ.17 ರಂದು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಭವನದಲ್ಲಿ ನಡೆಯಿತು. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದಾಗಿಯೇ ಇಂತಹ ಪ್ರಕರಣಗಳು ಜಾಸ್ತಿಯಾಗಲು ಮುಖ್ಯ ಕಾರಣವಾಗಿದೆ ಎಂದ ಹರಿಣಾಕ್ಷಿಯವರು, ಮಕ್ಕಳ ದಿನನಿತ್ಯದ ಚಟುವಟಿಕೆಗಳ ಮೇಲೆ ಹೆತ್ತವರು ಗಮನ ಹರಿಸಬೇಕಾಗಿದೆ. ಮಕ್ಕಳು ದಾರಿ ತಪ್ಪದಂತೆ ಜಾಗೃತಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕಾಗಿದೆ ಎಂದು ಅವರು ಮಕ್ಕಳ ಹಾಗೇ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಸ್ಥಳೀಯ ಗ್ರಾಮ ಪಂಚಾಯತ್‌ಗೆ, ಇಲಾಖೆಗೆ ಹಾಗೇ ಮಹಿಳಾ ಸಹಾಯವಾಣಿಗೆ ತಿಳಿಸುವಂತೆ ಹರಿಣಾಕ್ಷಿಯವರು ಕೇಳಿಕೊಂಡರು.


ಸಭಾಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಮಾತನಾಡಿ, ಮಹಿಳೆಯರ ಹಾಗೇ ಮಕ್ಕಳ ಮೇಲೆ ನಡೆಯುವ ಯಾವುದೇ ದೌರ್ಜನ್ಯವಿದ್ದರೂ ನೇರವಾಗಿ ಗ್ರಾ.ಪಂ ಅಧ್ಯಕ್ಷರಿಗೆ, ಪಿಡಿಓ, ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಕಾನೂನು ರೀತಿಯಲ್ಲಿ ಪರಿಹಾರ ದೊರಕಿಸಿಕೊಡುವ ಬಗ್ಗೆ ಪ್ರಯತ್ನ ಮಾಡುತ್ತೇವೆ. ಈಗಾಗಲೇ ಗ್ರಾಮದಲ್ಲಿ 3 ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಪಂಚಾಯತ್‌ನಿಂದ ಆಗಿದೆ ಎಂಬ ಮಾತನ್ನು ಕೂಡ ಈ ಸಂದರ್ಭದಲ್ಲಿ ಅವರು ಹೇಳಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆಯವರು ಮಾತನಾಡಿ, ಪಂಚಾಯತ್‌ನಲ್ಲಿ ಕಾವಲು ಸಮಿತಿ ಇದ್ದು ಪ್ರತಿ ತಿಂಗಳು ಸಭೆ ನಡೆಸುತ್ತಿದ್ದೇವೆ. ಮಹಿಳೆಯರಿಗೆ ಅಥವಾ ಕಿಶೋರಿಯರಿಗೆ ಯಾವುದೇ ರೀತಿಯ ದೌರ್ಜನ್ಯವಾದರೂ ಪಂಚಾಯತ್ ಅಧ್ಯಕ್ಷರು, ಅಧಿಕಾರಿ ವರ್ಗದವರನ್ನು ಸಂಪರ್ಕಿಸುವಂತೆ ಕೇಳಿಕೊಂಡರು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಓ ವಿದ್ಯಾ ಹಾಗೂ ಸ್ವಯಂ ನಿವೃತ್ತಿ ಹೊಂದಿದ ಸಿಎಚ್‌ಓ ಸೌಮ್ಯರವರು ಆರೋಗ್ಯ ಹಾಗೇ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನರೇಗಾದಡಿ ಸ್ತ್ರೀಶಕ್ತಿ ದುಡಿಯೋಣ ಬಾ ವಿಶೇಷ ಅಭಿಯಾನದ ಸಭೆಯು ನಡೆಯಿತು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆಯವರು ನರೇಗಾದ ಬಗ್ಗೆ ಮಾಹಿತಿ ನೀಡಿದರು.ಶವ ಸಂಸ್ಕಾರದ ಬಗ್ಗೆ ಪಂಚಾಯತ್‌ನಿಂದ ನೀಡುವ ಸಹಾಯಧನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಶುಭಾಷಿಣಿ, ಮೀನಾಕ್ಷಿ ವಿ.ರೈ, ಜಯಂತಿ ಆರ್.ಭಂಡಾರಿ ಹಾಗೇ ಅಂಗವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಧರ್ಮಣ್ಣ, ಮಾಲತಿ , ಜ್ಯೋತಿ, ಅನುಷಾ, ರಫೀಕ್ ತಿಂಗಳಾಡಿ ಸಹಕರಿಸಿದ್ದರು.


ಸನ್ಮಾನ,ಗೌರವಾರ್ಪಣೆ
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಓ ಆಗಿ ಕೆಯ್ಯೂರು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಸ್ವಯಂ ನಿವೃತ್ತಿ ಹೊಂದಿದ ಸೌಮ್ಯರವರನ್ನು ಈ ಸಂದರ್ಭದಲ್ಲಿ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸೌಮ್ಯರವರ ಪತಿ ಶಶಿಧರ್ ಉಪಸ್ಥಿತರಿದ್ದರು.


ಮಹಿಳಾ ಸಹಾಯವಾಣಿ 181 ಗೆ ಕರೆ ಮಾಡಿ
ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗಿ ಮನೆಯೊಳಗೆಯೇ ನಡೆಯುತ್ತಿದೆ. ಹೆಚ್ಚಿನ ಪ್ರಕರಣಗಳು ಮನೆಯೊಳಗೆಯೇ ನಡೆದಿರುವುದೆ ದಾಖಲಾಗಿದೆ. ಅಪ್ರಾಪ್ತರಿಗೆ ಅಥವಾ ಮಹಿಳೆಯರಿಗೆ ಯಾರಿಂದಲೇ ಆಗಲಿ ಯಾವುದೇ ರೀತಿಯ ದೌರ್ಜನ್ಯಗಳು ನಡೆದರೆ ಮಹಿಳಾ ಸಹಾಯವಾಣಿ 181 ಗೆ ಕರೆ ಮಾಡಬಹುದು ಅಥವಾ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆಗೆ ದೂರು ಅರ್ಜಿ ಸಲ್ಲಿಸಬಹುದು ಅಥವಾ ಸ್ಥಳೀಯ ಪಂಚಾಯತ್‌ಗೆ ತಿಳಿಸಬಹುದಾಗಿದೆ. ಪ್ರತಿ ಬುಧವಾರ ಮತ್ತು ಶನಿವಾರ ಇಲಾಖೆಯಲ್ಲಿ ನ್ಯಾಯವಾದಿಗಳ ಮೂಲಕ ವಿಚಾರಣೆ ಕೂಡ ನಡೆಯುತ್ತದೆ.

LEAVE A REPLY

Please enter your comment!
Please enter your name here