ಉಪ್ಪಿನಂಗಡಿ: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಚಾರಣೆ ನಡೆಸಿದ ಭಾರತೀಯ ರಕ್ಷಣಾ ಪಡೆಗೆ ಬೆಂಬಲ ಸೂಚಿಸಿ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ( ನಿ) ಇದರ ವತಿಯಿಂದ ದೇಶದ ರಕ್ಷಣಾ ನಿಧಿಗೆ 2.5 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಅವರು ನಿವೃತ್ತ ಬಿಎಸ್ಸೆಫ್ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯರವರಿಗೆ ಚೆಕ್ ಹಸ್ತಾಂತರಿಸಿ, ದೇಶದ ಪ್ರತಿಯೋರ್ವನಿಗೂ ರಾಷ್ಟ್ರ ಮೊದಲು ಉಳಿದೆಲ್ಲವೂ ಬಳಿಕ ಎನ್ನುವ ತತ್ವದ ಪಾಲನೆ ಮಾಡಬೇಕು. ದೇಶದ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮನೋಸಂಕಲ್ಪ ನಮ್ಮದಾಗಿರಬೇಕು. ಈ ನಿಟ್ಟಿನಲ್ಲಿ ಉಪ್ಪಿನಂಗಡಿ ಸಹಕಾರಿ ಸಂಘದ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದರೆ, ನಿರ್ದೇಶಕರು ತಮ್ಮ ಮೀಟಿಂಗ್ ಭತ್ಯೆಯನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ಚಂದಪ್ಪ ಮೂಲ್ಯ ರವರು , ಪ್ರಸಕ್ತ ನಮ್ಮ ದೇಶವನ್ನು ಕೆಣಕಿದವರಿಗೆ ತ್ವರಿತ ದಂಡನೆಯಾಗುತ್ತಿದೆ. ಸೇನಾ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸುತ್ತಿರುವ ಕೇಂದ್ರ ಸರಕಾರದ ನಡೆ ಶ್ಲಾಘನೀಯ. ದೇಶದ್ರೋಹಿ ದುರುಳರನ್ನು ಮಣ್ಣಿನಲ್ಲಿ ಮಣ್ಣಾಗಿಸುವ ಕಾರ್ಯತಂತ್ರ ಸ್ವಾಗತಾರ್ಹ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ಸದಸ್ಯರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ರಾಘವ ನಾಯ್ಕ, ಸಂಘದ ಮಾಜಿ ಅಧ್ಯಕ್ಷ ಯಶವಂತ ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಸಿಬ್ಬಂದಿ ಪುಷ್ಪರಾಜ ಶೆಟ್ಟಿ, ಪ್ರವೀಣ್ ಆಳ್ವ ಮತ್ತಿತರ ಸಿಬ್ಬಂದಿ ಭಾಗವಹಿಸಿದ್ದರು.