ಪುತ್ತೂರು: “ಪೆನ್ಸಿಲ್ ಬಾಕ್ಸ್” ಖ್ಯಾತಿಯ ರಝಾಕ್ ಪುತ್ತೂರು ನಿರ್ದೇಶನದ “ಸ್ಕೂಲ್ ಲೀಡರ್” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಮೇ.20 ರಂದು ನಡೆಯಿತು.
ಅಂತಾರಾಷ್ಟ್ರೀಯ ಗ್ರಾಫಿಕ್ ಕಲಾವಿದ ಕರಣ್ ಆಚಾರ್ಯ ಟ್ರೈಲರ್ ಬಿಡುಗಡೆಗೊಳಿಸಿದರು. ಟ್ರೈಲರ್ ಗೆ ಸಿನಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ ತಿಳಿಸಿದ್ದಾರೆ. ಈ ಹಿಂದೆ 22ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿದ “ಗಂಧದ ಕುಡಿ” ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೆ ಕಾಲಿಟ್ಟ ಸತ್ಯೇಂದ್ರ ಪೈ ಸ್ಕೂಲ್ ಲೀಡರ್ ರಾಜ್ಯದ ಜನಮಾನಸವನ್ನು ಗೆಲ್ಲಲ್ಲಿದ್ದಾನೆ ಎನ್ನುವ ವಿಶ್ವಾಸದಲ್ಲಿದ್ದಾರೆ.
“ಗಂಧದ ಕುಡಿ” ಚಿತ್ರದಲ್ಲಿ ಸಹನಿರ್ದೇಶಕನಾಗಿ ಮತ್ತು “ಪೆನ್ಸಿಲ್ ಬಾಕ್ಸ್” ಚಿತ್ರದ ನಿರ್ದೇಶಕನಾಗಿ ದುಡಿದ ರಝಾಕ್ ಪುತ್ತೂರು ಈ ಚಿತ್ರದಲ್ಲಿ ಮತ್ತೆ ನಿರ್ದೇಶಕನಾಗಿ ದುಡಿದಿದ್ದಾರೆ. ಮಾತ್ರವಲ್ಲದೆ ಚಿತ್ರದ ಹಾಡು, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಹೈಸೂಲ್ಕ್ ಮಕ್ಕಳ ಶೈಕ್ಷಣಿಕ ಬದುಕಿನ ಕಥಾಹಂದರವನ್ನು ಹೊಂದಿರುವ ಈ ಚಿತ್ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದವರ ಮನಸೆಳೆಯುವುದರಲ್ಲಿ ಎರಡು ಮಾತಿಲ್ಲ ಎಂಬುದು ಟ್ರೈಲರ್ ವೀಕ್ಷಿಸಿದ ಚಿತ್ರ ತಜ್ಜರ ಅಭಿಪ್ರಾಯ. ತುಳುಚಿತ್ರರಂಗದ ದಿಗ್ಗಜ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರಕ್ಕೆ ಮತ್ತಷ್ಟು ಮೆರೆಗು ನೀಡಿದೆ. ಮೋಹನ್ ಪಡ್ರೆ ಛಾಯಾಗ್ರಹಣ, ಜಯ ಕಾರ್ತಿ ಸಂಗೀತ, ಸಚಿನ್ ರಾಮ್ ಸಂಕಲನ, ಆಶಿಷ್ ಅಂಚನ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಅಕ್ಷತ್ ವಿಟ್ಲ ಸಹ ನಿರ್ದೇಶಕರಾಗಿದ್ದು, ಸುದರ್ಶನ್ ಶಂಕರ್, ಎಂ.ಎಂ ವಿಮಲ್ ಸಹ ನಿರ್ಮಾಪಕರಾಗಿದ್ದಾರೆ. ನವಿರಾದ ಹಾಸ್ಯದ ಜೊತೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ “ಸ್ಕೂಲ್ ಲೀಡರ್” ಮೇ.30 ರಂದು ಕರಾವಳಿಯಾದ್ಯಂತ ಬೆಳ್ಳಿ ತೆರೆಗೆ ಬರಲಿದ್ದು, ಚಿತ್ರಾಭಿಮಾನಿಗಳು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪೋಷಕರು ಚಿತ್ರ ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಬೆಂಬಲಿಸುವಂತೆ ನಿರ್ದೇಶಕ ರಝಾಕ್ ಪುತ್ತೂರು ಮತ್ತು ನಿರ್ಮಾಪಕ ಸತ್ಯೇಂದ್ರ ಪೈ ಮನವಿ ಮಾಡಿದ್ದಾರೆ.