ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ, ರಂಗಪೂಜೆ ಹಾಗೂ ಭಜನಾ ಕಾರ್ಯಕ್ರಮವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೇ 23 ರಂದು ಜರಗಲಿದೆ.
ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ದೈವಗಳಿಗೆ ತಂಬಿಲ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದೇವರಿಗೆ ಕಲಶಾಭಿಷೇಕ, ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ಪುಣಚ ಶ್ರೀ ಮಹಮ್ಮಾಯಿ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು, ನವೋದಯ ಸ್ವ-ಸಹಾಯ ಸಂಘ, ವಿವಿಧ ಪೂಜಾ ಸಮಿತಿ ಸದಸ್ಯರು ಸಹಕರಿಸಲಿದ್ದಾರೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ ಹಾಗೂ ಸದಸ್ಯರು ಮತ್ತು ಶ್ರೀ ಕ್ಷೇತ್ರದ ಪವಿತ್ರಪಾಣಿ, ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಯಕ್ಷ ತೆಲಿಕೆ” ಯಕ್ಷ ಹಾಸ್ಯ ವೈಭವ..
ರಾತ್ರಿ ಎಂಟು ಗಂಟೆಗೆ ಕುಸಾಲ್ದ ಗುರಿಕಾರ ದಿನೇಶ್ ಕೋಡಪದವು ಸಾರಥ್ಯದಲ್ಲಿ, ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರಾದ ದಿನೇಶ್ ಕೋಡಪದವು, ಯಕ್ಷಬೊಳ್ಳಿ ದಿನೇಶ್ ರೈ ಕಡಬ, ರಂಗದರಾಜೆ ಸುಂದರ್ ರೈ ಮಂದಾರ, ರಂಗ ಸವ್ಯಸಾಚಿ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ತೆಲಿಕೆದ ಅರಸೆ ಸುಂದರ ಬಂಗಾಡಿ ಅಭಿನಯದಲ್ಲಿ, ಧೀರಜ್ ರೈ ಸಂಪಾಜೆರವರ ಭಾಗವತಿಕೆಯೊಂದಿಗೆ “ಯಕ್ಷ ತೆಲಿಕೆ” ಯಕ್ಷ ಹಾಸ್ಯ ವೈಭವ..ನಿರಂತರ ಮೂರು ಗಂಟೆಗಳ ನಗುವಿನ ಟಾನಿಕ್ ಅನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.