ಆಲಂಕಾರು: ಮುಂದಿನ 5 ವರ್ಷಗಳ ಅವಧಿಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್ ಭಟ್ ಉಪ್ಪಂಗಳ ಹಾಗೂ ಉಪಾಧ್ಯಕ್ಷರಾಗಿ ದಯಾನಂದ ರೈ ಮನವಳಿಕೆಗುತ್ತು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 23ರಂದು ಬೆಳಿಗ್ಗೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷತೆಗೆ ರಮೇಶ್ ಭಟ್ ಉಪ್ಪಂಗಳ ಅವರ ಹೆಸರನ್ನು ನಿರ್ದೇಶಕ ದಯಾನಂದ ರೈ ಮನವಳಿಕೆಗುತ್ತು ಸೂಚಿಸಿ ನಿರ್ದೇಶಕ ಪದ್ಮಪ್ಪ ಗೌಡ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ದಯಾನಂದ ರೈ ಮನವಳಿಕೆಗುತ್ತು ಅವರ ಹೆಸರನ್ನು ನಿರ್ದೇಶಕ ಕೇಶವ ಗೌಡ ಆಲಡ್ಕ ಸೂಚಿಸಿ ನಿರ್ದೇಶಕ ಕುಂಞ ಮುಗೇರ ಅನುಮೋದಿಸಿದರು. ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ನಿರ್ದೇಶಕರಾದ ಉದಯ ಸಾಲ್ಯಾನ್ ಮಾಯಿಲ್ಗ, ರತ್ನಾ ಬಿ.ಕೆ. ಕೊಂಡಾಡಿಕೊಪ್ಪ, ವಿಜಯಾ ಎಸ್.ಅಂಬಾ, ಅಶೋಕ ಪೆರಾಬೆ, ಲೋಕೇಶ್ ಕಮ್ಮಿತ್ತಿಲು, ಅಶೋಕ ಗೋಕುಲನಗರ, ಗಾಯತ್ರಿ ಕುಂಡಡ್ಕ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ಶರತ್‌ಕುಮಾರ್ ಡಿ.ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿದ್ದ ಉಪನಿಬಂಧಕರ ಕಚೇರಿ ದ.ಕ.ಜಿಲ್ಲೆ ಮಂಗಳೂರು ಇಲ್ಲಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
7ನೇ ಬಾರಿಗೆ ರಮೇಶ್ ಭಟ್‌ಗೆ ಚುಕ್ಕಾಣಿ;
ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ರಮೇಶ್ ಭಟ್ ಅವರು ಈ ಹಿಂದೆ 1991ರಿಂದ 93ರ ತನಕ ಹಾಗೂ ಆ ಬಳಿಕ 1994ರಿಂದ 2020ರ ತನಕ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸುಮಾರು 29ವರ್ಷ ಸೇವೆ ಸಲ್ಲಿಸಿದ್ದರು. ಇವರ ಅವಧಿಯಲ್ಲಿ ಸಂಘದ ಪ್ರಧಾನ ಕಚೇರಿ, ಶಾಖೆಗಳಿಗೆ ನೂತನ ಕಟ್ಟಡ ರಚನೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿವೆ. ಇದೀಗ 7ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವ ಉಪಾಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸಿಇಒ ಆಗಿ ನಿವೃತ್ತರಾಗಿದ್ದ ದಯಾನಂದ ರೈಗೆ ಉಪಾಧ್ಯಕ್ಷತೆ:
ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ದಯಾನಂದ ರೈ ಮನವಳಿಕೆ ಅವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರು ಪ್ರಸ್ತುತ ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಮನವಳಿಕೆಗುತ್ತು ದೈವ ದೇವರುಗಳ ಟ್ರಸ್ಟ್‌ನ ಅಧ್ಯಕ್ಷರಾಗಿ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವ ಉಪಾಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಲಂಕಾರು ಶ್ರೀ ದುರ್ಗಾಂಬಾ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.
ಎರಡೂವರೇ ತಿಂಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮಾ.೨ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆದಿತ್ತು. ಸಹಕಾರ ಭಾರತಿಯ 12, ರಮೇಶ್ ಭಟ್ ಉಪ್ಪಂಗಳ ಬಳಗದ 11 ಹಾಗೂ ಕಾಂಗ್ರೆಸ್ ಬೆಂಬಲಿತ ಒಬ್ಬರು ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ನಡೆದು ಮತ ಎಣಿಕೆ ನಡೆದರೂ ಕೋರ‍್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಯಾಗಿರಲಿಲ್ಲ. ಎ.24ರಂದು ಹೈಕೋರ‍್ಟ್‌ನಲ್ಲಿ ವಿಚಾರಣೆ ನಡೆದು ತೀರ್ಪು ಪ್ರಕಟಗೊಂಡಿತ್ತು. ಹೈಕೋರ‍್ಟ್ ತೀರ್ಪಿನಂತೆ ರಮೇಶ್ ಭಟ್ ಉಪ್ಪಂಗಳ ಬಳಗದ 10 ಮಂದಿ ಹಾಗೂ ಸಹಕಾರ ಭಾರತಿಯ ಇಬ್ಬರು ನಿರ್ದೇಶಕರಾಗಿ ಆಯ್ಕೆಗೊಂಡಿದ್ದರು. ಮೇ 23ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಂiಲ್ಲಿ ರಮೇಶ್ ಭಟ್ ಬಳಗದ ರಮೇಶ್ ಭಟ್ ಯು.,ಅಧ್ಯಕ್ಷರಾಗಿ ಹಾಗೂ ದಯಾನಂದ ರೈ ಮನವಳಿಕೆಗುತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.