ಪುತ್ತೂರು: ಬೆಳ್ತಂಗಡಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮಂಡೆಕೊಚ್ಚಿ ನಿವಾಸಿ ಸುನಿಲ್ ಬೋರ್ಕರ್ ಹಾಗೂ ಮಂಗಳೂರಿನ ಜಯರಾಮ್ ಪಿ. ಎಂಬವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅತ್ಯಂತ ಪುರಾತನ ಸ್ಮಾರ್ಥ ಸಂಪ್ರದಾಯವನ್ನು ಅನುಸರಿಸುವ ಕೈವಲ್ಯ ಮಠದ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಸಂಧ್ಯಾ ಎಸ್. ನಾಯಕ್ರವರು 23.11.206ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದಲ್ಲಿರುವ 0.25 ಎಕರೆ ಕೃಷಿಯೇತರ ಭೂಮಿಯನ್ನು ಕೈವಲ್ಯ ಮಠಕ್ಕೆ ದಾನವಾಗಿ ನೀಡಿದ್ದರು. ಈ ಭೂಮಿಯನ್ನು ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು 20 ಲಕ್ಷ ರೂಪಾಯಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಸುನಿಲ್ ಬೋರ್ಕರ್ ಮತ್ತು ಜಯರಾಮ್ ಪಿ. ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಇದು ಸಿವಿಲ್ ಸ್ವರೂಪದ ಪ್ರಕರಣವಾಗಿರುವುದರಿಂದ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಲಾಗಿತ್ತು. ನ್ಯಾಯಾಲಯ 29.04.2025ರಂದು ಬೆಳ್ತಂಗಡಿ ಠಾಣೆಗೆ ಈ ದೂರನ್ನು ತನಿಖೆಗಾಗಿ ವರ್ಗಾಯಿಸಿತ್ತು. ವಿಷಯ ತಿಳಿದ ಸ್ವಾಮೀಜಿಯವರು ಬೆಂಗಳೂರಿನ ಖ್ಯಾತ ಕಾನೂನು ಸಂಸ್ಥೆ ಕಾಮತ್ ಜೂರಿಸ್ ಅವರ ಮುಖಾಂತರ ಸುಪ್ರೀಂಕೋರ್ಟ್ ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ರವರ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ತನ್ನ ಮೇಲಿನ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಲು ಕೋರಿದ್ದರು.
ಮೇ.20ರಂದು ಈ ಅರ್ಜಿಯ ವಿಚಾರಣೆ ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಪೀಠದಲ್ಲಿ ನಡೆದಿದ್ದು ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ರವರು ಸ್ವಾಮೀಜಿ ಪರ ವಾದ ಮಂಡಿಸಿ ಸಿವಿಲ್ ಸ್ವರೂಪದ ವಿವಾದಕ್ಕೆ ಕ್ರಿಮಿನಲ್ ಬಣ್ಣ ಹಚ್ಚಿ ಸ್ವಾಮೀಜಿಯವರ ವಿರುದ್ಧ ದಾಖಲಿಸಿರುವ ಸುಳ್ಳು ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದರು. ವಕೀಲರ ವಾದ ಆಲಿಸಿದ ನಾಯಮೂರ್ತಿ ರಾಚಯ್ಯ ಅವರು ಬೆಳ್ತಂಗಡಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ. ಇದರಿಂದಾಗಿ ಜೂನ್ ೨೫ಕ್ಕೆ ನಡೆಸಲು ನಿಗದಿಯಾಗಿದ್ದ ವಿಚಾರಣಾ ಪ್ರಕ್ರಿಯೆ ರದ್ದುಗೊಂಡಿದೆ.
ಕೈವಲ್ಯ ಮಠ ಮತ್ತು ಸ್ವಾಮೀಜಿಯವರ ತೇಜೋವಧೆ ಮಾಡಲು ಕೆಲವು ಮಂದಿ ನಿರಂತರ ಪ್ರಯತ್ನ ಮಾಡುತ್ತಿರುವುದು ಸ್ವಾಮೀಜಿಯವರ ಗಮನಕ್ಕೆ ಬಂದಿದ್ದು ಸ್ವಾಮೀಜಿಯವರು ಅಂತವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದಾಗಲೂ ಕೆಲವರು ಸ್ವಾಮೀಜಿಯವರ ಸಹಕಾರಕ್ಕೆ ಬಾರದೆ ಮೌನ ವಹಿಸಿರುವುದು ಈ ದುಷ್ಕೃತ್ಯಗಳಿಗೆ ಪ್ರಚೋದನೆ ಕೊಟ್ಟಂತೆ ಆಗಿದೆ ಎಂಬುದನ್ನು ಈ ಪ್ರಕರಣ ನಿರೂಪಿಸುತ್ತದೆ ಎಂದು ಮಠದ ಭಕ್ತರ ಪ್ರಕಟಣೆ ತಿಳಿಸಿದೆ.