ಪುತ್ತೂರು: ಮಿತ್ರವೃಂದ ವಾಲಿಬಾಲ್ ಮತ್ತು ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ದರ್ಬೆ ಲಿಟಲ್ ಫ್ಲವರ್ ಶಾಲೆಯ ಸಹಯೋಗದೊಂದಿಗೆ, ಯುವ ಕ್ರೀಡಾಪಟುಗಳನ್ನು ತಯಾರಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ನಡೆದ ವಾಲಿಬಾಲ್ ಮತ್ತು ಕಬಡ್ಡಿ ಉಚಿತ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೇ.24ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಒಂದು ತಿಂಗಳ ಕಾಲ ನಡೆದ ಉಚಿತ ತರಬೇತಿಯಲ್ಲಿ ಪರಿಣಿತ ಅರ್ಹ ವಾಲಿಬಾಲ್ ಮತ್ತು ಕಬಡ್ಡಿ ತರಬೇತುದಾರರಿಂದ ಬೆಳಿಗ್ಗೆ ಮತ್ತು ಸಂಜೆ ಎರಡು ಅವಧಿಯಲ್ಲಿ ತರಬೇತಿ ಶಿಬಿರಗಳು ನಡೆಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನೀಯರು ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಂಡರು.
ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಸಮಾಜದಲ್ಲಿ ಪ್ರತಿಭೆಗಳು ಬೆಳೆಯಲು ಸಮಾಜದಲ್ಲಿ ಸಾಕಷ್ಟು ಅವಕಾಶಗಳು ಇದೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಣದ ಜೊತೆ ಕ್ರೀಡೆಯನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದ ಉತ್ತಮ ಕ್ರೀಡಾಪಟುಗಳನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಿತ್ರವೃಂದ ಅಕಾಡೆಮಿಯಿಂದ ಉಚಿತ ತರಬೇತಿಗಳನ್ನು ನೀಡುತ್ತಿದ್ದು ಅವುಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಮಕ್ಕಳ ಪ್ರತಿಭೆಗಳು ಬೆಳೆಯಲು ಪೋಷಕರ ಸಹಕಾರವೂ ಮುಖ್ಯವಾಗಿದ್ದು ತರಬೇತಿಗಳಲ್ಲಿ ಪೋಷಕರು ಭಾಗವಹಿಸುವುದು ಬಹುಮುಖ್ಯವಾಗಿದೆ ಎಂದರು.
ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಜುಲಿಯನ್ ಪೀಟರ್ ಮಾತನಾಡಿ, ಮಿತ್ರ ವೃಂದ ಅಕಾಡೆಮಿಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ನೀಡಿದ್ದಾರೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಪುತ್ತೂರಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು ಎಂದರು.
ಮಿತ್ರವೃಂದ ವಾಲಿಬಾಲ್ ಮತ್ತು ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಪಿ.ವಿ ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ವಾಲಿಬಾಲ್ ಅಡಾಕ್ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ಗುತ್ತಿಗೆದಾರ ಜುನೈದ್, ಮಿತ್ರವೃಂದ ಅಕಾಡೆಮಿಯ ಸದಸ್ಯರಾದ ಪಿ.ವಿ ರಾಘವನ್, ಪಿ.ವಿ ನಾರಾಯಣನ್, ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ತರಬೇತುದಾರರಿಗೆ ಸಮವಸ್ತ್ರ ವಿತರಿಸಲಾಯಿತು.
ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆಮ್ಮಿಂಜೆ ಸ್ವಾಗತಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿ, ಪ್ರಸನ್ನ ಕುಮಾರ್ ವಂದಿಸಿದರು. ವಿನುತಾ, ವರ್ಷಾ, ರಕ್ಷಾ ಪ್ರಾರ್ಥಿಸಿದರು. ಸುಳ್ಯ ಎನ್‌ಎಂಸಿಯ ದೈಹಿಕ ಶಿಕ್ಷಣ ನಿರ್ದೇಶಕ ಸೀತಾರಾಮ, ಸಂಪ್ಯ ಅಕ್ಷಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್, ಸ್ಪೋರ್ಟ್ಸ್‌ಲೈನ್‌ನ ರಝಾಕ್, ಪ್ರಸನ್ನ ಕುಮಾರ್, ಹನೀಪ್ ಸಾಜ, ಇರ್ಷಾದ್, ಡಾ.ಪ್ರಖ್ಯಾತ್ ನಾರಾಯಣ, ರಫೀಕ್ ಆತೂರು, ಸಂದೀಪ್ ಕೆಮ್ಮಿಂಜೆ ಅತಿಥಿಗಳನ್ನು ಶಾಲು ಹಾಗೂ ಹೂ ಗುಚ್ಚ ನೀಡಿ ಸ್ವಾಗತಿಸಿದರು.
1972ರಲ್ಲಿ ಪ್ರಾರಂಭಗೊಂಡಿರುವ ಮಿತ್ರವೃಂದ ವಾಲಿಬಾಲ್ ಅಕಾಡೆಮಿಯು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಹೊನಲು ಬೆಳಕಿನ ವಾಲಿಬಾಲ್‌ನ್ನು ಪ್ರಾರಂಭಿಸಿದೆ. ಕಳೆದ ಒಂದೂವರೆ ದಶಕದಿಂದ ಉತ್ತಮ ವಾಲಿಬಾಲ್ ತರಬೇತಿ ನೀಡಲಾಗುತ್ತಿದ್ದು ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರನ್ನಾಗಿ ಮಾಡುವುದೇ ಅಕಾಡೆಮಿಯ ಉದ್ದೇಶವಾಗಿದೆ. ಸುಸಜ್ಜಿತವಾದ ಅಕಾಡೆಮಿ ಪ್ರಾರಂಭಿಸಲು ನಿವೇಶನವನ್ನು ಸರಕಾರದಿಂದ ಪಡೆದುಕೊಳ್ಳಲು ಪ್ರಯತ್ನಿಸಲಾಗಿದ್ದರೂ ಅದೂ ಕೈಗೂಡದೇ ಇದ್ದಾಗ ಸ್ವಂತ ಜಾಗ ಖರೀದಿ ಮಾಡಲಾಗಿದೆ. ಅಕಾಡೆಮಿ ಸ್ಥಾಪನೆಗೆ ಅನುದಾನಕ್ಕಾಗಿ ಶಾಸಕರ ನೇತೃತ್ವದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದ್ದು ಅನುದಾನ ಬರುವ ನಿರೀಕ್ಷೆಯಲ್ಲಿದ್ದೇವೆ.
ಬಾಲಚಂದ್ರ ಕೆಮ್ಮಿಂಜೆ, ಪ್ರಧಾನ ಕಾರ್ಯದರ್ಶಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ