ಉಪ್ಪಿನಂಗಡಿ: ಆದಿತ್ಯವಾರ ದಿನವಿಡೀ ಸುರಿದ ಭಾರೀ ಮಳೆಗೆ ಎಲ್ಲೆಡೆ ಅವ್ಯವಸ್ಥೆಗಳು ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿ ಘಾಟ್ ಪ್ರದೇಶ ಹಾಗೂ ಉಪ್ಪಿನಂಗಡಿಯ ಪಂಜಳ ಎಂಬಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯುಂಟಾದ ಘಟನೆ ನಡೆದಿದೆ.
ಶಿರಾಡಿ ಘಾಟಿನ ಸಕಲೇಶ್ ಪುರ ತಾಲೂಕು ದೊಡ್ಡತಪ್ಪಲು ಎಂಬಲ್ಲಿ ಗುಡ್ದ ಜರಿತ ಹಾಗೂ ವಾಹನ ಕೆಟ್ಟು ಹೋಗಿ ಹೆದ್ದಾರಿಯು ಏಕಮುಖ ಸಂಚಾರಕ್ಕೆ ಒಳಗಾಗಿ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಮಳೆಗಾಲ ಪ್ರಾರಂಭವಾದೊಡನೆಯೇ ಈ ಸಮಸ್ಯೆ ಉಂಟಾಗಿರುವುದು ಕಳವಳವನ್ನು ಮೂಡಿಸಿದೆ. ಕಳೆದ ಮಳೆಗಾಲದುದ್ದಕ್ಕೂ ಇದೇ ಪರಿಸರದಲ್ಲಿ ಗುಡ್ಡ ಕುಸಿತವುಂಟಾಗಿ ಪದೇ ಪದೇ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದ್ದು, ಈ ಭಾರಿ ಮೊದಲ ಮಳೆಗೇ ಮತ್ತೆ ಗುಡ್ಡ ಕುಸಿತ ಸಂಭವಿಸಿ ಪರಿಸ್ಥಿತಿಯನ್ನು ಭಯಾನಕ ಗೊಳಿಸಿದೆ. ಮಳೆಗಾಲದ ಮುನ್ನಾ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳದಿರುವುದು ಇದರಿಂದ ಗೋಚರಿಸಿದಂತಾಗಿದೆ. ಇದೇ ಸ್ಥಿತಿ ಮುಂದುವರೆದರೆ ಈ ಮಳೆಗಾಲದಲ್ಲಿಯೂ ಮಂಗಳೂರು ಬೆಂಗಳೂರು ನಡುವಣದ ಹೆದ್ದಾರಿ ಸಂಚಾರ ಸದಾ ಅನಿಶ್ಚಿತತೆಯಲ್ಲಿ ಸಾಗುವಂತಾಗಲಿದೆ.
ಹೆದ್ದಾರಿ ಅಗಲೀಕರಣದ ಕಾಮಗಾರಿಯಲ್ಲಿ ಅಪೂರ್ಣತೆ ಉಪ್ಪಿನಂಗಡಿಯ ಪಂಜಳದಲ್ಲಿ ರಸ್ತೆಯಲ್ಲೇ ಕೆಸರು ನೀರು
ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿರುವ ಉಪ್ಪಿನಂಗಡಿಯ ಪಂಜಳ ಎಂಬಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗದೆ ನೇತ್ರಾವತಿ ನದಿ ದಡದಲ್ಲಿನ ಸರ್ವೀಸ್ ರಸ್ತೆಗೆ ಕೆಸರು ಭರಿತ ನೀರು ಹರಿದು ಬಂದು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕೆಸರಿನಲ್ಲಿ ಜಾರಿದರೆ ನೇರ ನದಿಗಿಳಿಯುವ ಸಾಧ್ಯತೆಯಿಂದಾಗಿ ವಾಹನ ಸಂಚಾರ ಭಯವನ್ನುಂಟು ಮಾಡುತ್ತಿತ್ತು. ಈ ಬಾರಿ ನಿಗದಿತ ಅವಧಿಗಿಂತ ಮೊದಲೇ ಮಳೆ ಸುರಿದ ಕಾರಣಕ್ಕೆ ಈ ಭಾಗದಲ್ಲಿ ನಡೆಸಬೇಕಾಗಿದ್ದ ಚರಂಡಿಯ ಕಾಮಗಾರಿ ನಡೆಯದೇ ಇದ್ದ ಕಾರಣಕ್ಕೆ ಈ ಸಮಸ್ಯೆ ಮೂಡಿದ್ದು, ವಾಹನಗಳು ಸಂಚರಿಸಲಾಗದೆ ತಡೆಯುಂಟಾದಾಗ ಸ್ಥಳದಲ್ಲಿ ತಾತ್ಕಾಲಿಕ ನೆಲೆಯ ಚರಂಡಿಯನ್ನು ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಯಿತು. ಬಳಕವೂ ಈ ಭಾಗದಲ್ಲಿ ವಾಹನ ಸಂಚಾರ ಮಂದಗತಿಯಲ್ಲಿಯೇ ಸಾಗುವಂತಾಯಿತು.