ಪುತ್ತೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಒಳಮೊಗ್ರು ಗ್ರಾಮದ ವಿವಿಧ ಕಡೆಗಳಲ್ಲಿ ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಅಲ್ಲಲ್ಲಿ ಧರೆ ಕುಸಿತ ಉಂಟಾಗಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ ಇದಲ್ಲದೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಮನೆಗೆ ಹಾನಿಯುಂಟಾದ ಬಗ್ಗೆ ತಿಳಿದು ಬಂದಿದೆ. ಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಟ್ಟಿನೋಪಿನಡ್ಕದಲ್ಲಿ ಧರೆ ಕುಸಿತ, ಮನೆಗೆ ಹಾನಿ
ಗ್ರಾಮದ ಕುಟ್ಟಿನೋಪಿನಡ್ಕ ಶಾಂತಿಗೋಡು ಎಂಬಲ್ಲಿ ಅವ್ವಮ್ಮ ಎಂಬವರ ಮನೆಯ ಹಿಂಬದಿಯಲ್ಲಿ ಭೂ ಕುಸಿತ ಉಂಟಾಗಿ ಮನೆಗೆ ಹಾನಿಯುಂಟಾಗಿದೆ. ಗೋಡೆ ಬಿರುಕು ಬಿಟ್ಟಿದ್ದು ಹಂಚುಗಳು ಹುಡಿಯಾಗಿವೆ. ಇದರಿಂದ ಸುಮಾರು 3 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಪರ್ಪುಂಜದಲ್ಲಿ ಮನೆ ಕುಸಿತ: ಪರ್ಪುಂಜ ಕಾಲನಿಯಲ್ಲಿ ಚಿತ್ರಾ ಎಂಬವರ ವಾಸದ ಮನೆಯ ಗೋಡೆ ಕುಸಿತಗೊಂಡಿದ್ದು ಮನೆಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.
ಮುಡಾಲಮೂಲೆಯಲ್ಲಿ ಧರೆ ಕುಸಿತ: ಮುಡಾಲಮೂಲೆ ಶೇಷಪ್ಪ ನಾಯ್ಕ್ ಎಂಬವರ ಮನೆಯ ಹಿಂಬದಿಯ ಧರೆ ಕುಸಿತಗೊಂಡಿದ್ದು ಮನೆಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ: ಕಡ್ತಿಮಾರ್ ಎಂಬಲ್ಲಿ ಹಮೀದ್ ಎಂಬವರ ಮನೆಯ ಪಕ್ಕದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಕಂಬ ನೀರಿನ ಟ್ಯಾಂಕ್ ಮೇಲೆ ಬಿದ್ದು ಟ್ಯಾಂಕ್ ಒಡೆದು ಹೋಗಿದೆ ಎಂದು ತಿಳಿದು ಬಂದಿದೆ. ಉಜಿರೋಡಿ ಮನೆಗೆ ಹಾನಿ: ಉಜಿರೋಡಿ ಎಂಬಲ್ಲಿ ಗೀತಾ ಕಿಟ್ಟು ಆಚಾರ್ಯರವರ ಮನೆಯ ಒಂದು ಭಾಗ ಸಂಪೂರ್ಣ ಕುಸಿತಗೊಂಡು ಹಾನಿ ಸಂಭವಿಸಿದೆ.
ಗ್ರಾಪಂ ಉಪಾಧ್ಯಕ್ಷರು, ಅಧಿಕಾರಿಗಳ ಭೇಟಿ, ಪರಿಶೀಲನೆ: ಘಟನೆ ನಡೆದ ಸ್ಥಳಗಳಿಗೆ ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಕಾರ್ಯದರ್ಶಿ ಜಯಂತಿ, ಗ್ರಾಮ ಆಡಳಿತ ಅಧಿಕಾರಿ ಸುನೀತಾ, ಸಹಾಯಕ ದೀಪಕ್, ಸದಸ್ಯ ಶೀನಪ್ಪ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.