ಉಪ್ಪಿನಂಗಡಿ: ಆದಿತ್ಯವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳೆರಡೂ ಮೈದುಂಬಿ ಹರಿಯ ತೊಡಗಿದ್ದು, ಉಪ್ಪಿನಂಗಡಿಯಲ್ಲಿ ಸಮುದ್ರಮಟ್ಟಕ್ಕಿಂತ 27 ಮೀಟರ್ ಎತ್ತರದಲ್ಲಿ ನದಿಗಳು ಹರಿಯತೊಡಗಿದೆ.
ಹವಾಮಾನ ಇಲಾಖಾ ದಾಖಲೆ ಪ್ರಕಾರ ಉಪ್ಪಿನಂಗಡಿಯಲ್ಲಿ ಭಾನುವಾರದಿಂದ ಸೋಮವಾರ ಬೆಳಗ್ಗಿನ ತನಕ 119.4 ಮಿ.ಮೀ. ಮಳೆಯಾಗಿತ್ತು. ಸೋಮವಾರ ಮುಂಜಾನೆವರೆಗೆ ಏರುಗತಿಯಲ್ಲಿದ್ದ ನದಿ ನೀರಿನ ಹರಿವು ಬಳಿಕ ಇಳಿಮುಖವಾಗಿ ಹರಿಯತೊಡಗಿತ್ತು. ಆದಾಗ್ಯೂ ನದಿಯಲ್ಲಿ ನೀರಿನ ಮಟ್ಟ 27 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ .
ಹೆದ್ದಾರಿ ಕಾಮಗಾರಿಯ ಅಪೂರ್ಣತೆಯ ಕಾರಣಕ್ಕೆ ಬಿರುಸಿನ ಮಳೆಯಾದ ಸಮಯದಲ್ಲೆಲ್ಲಾ ಮಳೆ ನೀರು ಸಮರ್ಪಕವಾಗಿ ಚರಂಡಿಯಲ್ಲಿ ಹರಿಯದೆ ಸಮಸ್ಯಾತ್ಮಕವಾಗಿ ಹರಿಯುತ್ತಿದೆ. ಈ ಬಾರಿ ಹೆದ್ದಾರಿ ವಿಸ್ತರಣಾ ಕಾಮಗಾರಿಯ ತಂಡ ಚರಂಡಿ ನಿರ್ಮಾಣ ಕಾರ್ಯದ ವೇಳೆ ಕಾಮಗಾರಿ ನಿರತ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಕಾರ್ಮಿಕರು ಕೆಲಸ ನಿರ್ವಹಿಸಲು ನಿರಾಕರಿಸಿದ ಘಟನಾವಳಿಗಳಿಂದಾಗಿ ಅಲ್ಲಲ್ಲಿ ಸಮಸ್ಯೆಗಳು ಜೀವಂತವಾಗಿದೆ ಎನ್ನಲಾಗಿದೆ.
ಲಕ್ಷಾಂತರ ರೂ ನಷ್ಟಕ್ಕೆ ತುತ್ತಾದ ಮೆಸ್ಕಾಂ:
ಈ ಬಾರಿಯ ಮಳೆಗಾಲ ಪ್ರಾರಂಭವಾದ ನಾಲ್ಕೈದು ದಿನಗಳಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಉಪ್ಪಿನಂಗಡಿ ಮೆಸ್ಕಾಂ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 32 ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟು, ಒಂದು ವಿದ್ಯುತ್ ಪರಿವರ್ತಕ ಹಾನಿಗೊಂಡಿರುವುದು ಸೇರಿ ಗಣನೀಯ ಹಾನಿಯುಂಟಾಗಿದೆ. ಆದಿತ್ಯವಾರ ಸಾಯಂಕಾಲ ಬೀಸಿದ ಬಿರುಗಾಳಿ ಮಳೆಗೆ ಹಿರೆಬಂಡಾಡಿ ಪರಿಸರದಲ್ಲೊಂದರಲ್ಲೇ 17 ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿದೆ. ಪರಿಣಾಮವಾಗಿ ಈಗಾಗಲೇ ರೂ 8 ಲಕ್ಷದಷ್ಟು ನಷ್ಟವುಂಟಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ ನಿತಿನ್ ಕುಮಾರ್ ತಿಳಿಸಿದ್ದಾರೆ.