ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಬೊಳುಂಬುಡ ಪ್ರದೇಶದಲ್ಲಿ ಮೇ.25ರಂದು ಸಂಜೆಯ ಹೊತ್ತಿಗೆ ಭಾರೀ ಗಾಳಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದು, ಮನೆ ಭಾಗಶಃ ಹಾನಿಗೀಡಾಗಿದೆ. ಅದಾಗ್ಯೂ 7 ತೋಟಗಳಲ್ಲಿ ಸುಮಾರು 1800ಕ್ಕೂ ಅಧಿಕ ಅಡಿಕೆ ಮರಗಳು, 20ಕ್ಕೂ ಮಿಕ್ಕಿ ತೆಂಗಿನ ಮರಗಳು, 5 ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದ್ದು, ಈ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರೇಬಂಡಾಡಿ ಗ್ರಾಮದ ಬೊಲುಂಬುಡ ಮಜಿಕೂಡೇಲು ನಿವಾಸಿ ರುಕ್ಮಿಣಿ ಎಂಬವರ ಮನೆಯ ಮೇಲೆ ಮರವೊಂದು ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ. ಇವರ ತೋಟದಲ್ಲಿ 600 ಅಡಿಕೆ, 10 ತೆಂಗು, ನೀರಿನ ಟ್ಯಾಂಕ್ ದೂರಕ್ಕೆ ಎಸೆಯಲ್ಪಟ್ಟು ಪುಡಿಯಾಗಿದೆ. ಕೇದಗೆದಡಿ ಪರಿಸರದಲ್ಲಿ ಧನಂಜಯ ಗೌಡ ಎಂಬವರ ತೋಟದಲ್ಲಿ 500 ಅಡಿಕೆ ಮರ, 5 ತೆಂಗು, 5 ವಿದ್ಯುತ್ ಕಂಬಗಳು ಧರೆಗುರುಳಿದೆ. ಜನಾರ್ದನ ಗೌಡ ಎಂಬವರ ತೋಟದಲ್ಲಿ 450 ಅಡಿಕೆ ಮರ, 4 ತೆಂಗು, ಮನೆಯ ಸಿಮೆಂಟು ಶೀಟು ಹಾರಿ ಹೋಗಿದೆ. ಚಿದಾನಂದ ಎಂಬವರ ತೋಟದಲ್ಲಿ 35 ಅಡಿಕೆ, 5 ವಿದ್ಯುತ್ ಕಂಬ, ಫಾರೂಕ್ ಎಂಬವರ ತೋಟದಲ್ಲಿ 50 ಅಡಿಕೆ ಮರ, ದಿನೇಶ್ ಎಂಬವರ ತೋಟದಲ್ಲಿ 25 ಅಡಿಕೆ ಮರ, ಬರಮೇಲು ಹೊನ್ನಪ್ಪ ಗೌಡ ಎಂಬವರ ತೋಟದಲ್ಲಿ 100 ಅಡಿಕೆ ಮರ, ವಾಸಪ್ಪ ಗೌಡ ಎಂಬವರ ತೋಟದಲ್ಲಿ 75 ಅಡಿಕೆ ಮರಗಳು ಧರೆಗುರುಳಿ ಬಿದ್ದಿದ್ದು, ಈ ಪ್ರದೇಶದಲ್ಲಿ ಸುಮಾರು 25 ಲಕ್ಷಗಳಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ:
ಹಿರೇಬಂಡಾಡಿ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ, ಗ್ರಾಮ ಪಂಚಾಯತ್ ಕಾರ‍್ಯದರ್ಶಿ ಸತೀಶ್ ಮೇ.26ರಂದು ಘಟನಾ ಸ್ಥಳ ಬೊಲುಂಬುಡ ಕೇದಗೆದಡಿ ನಿವಾಸಿಗಳಾದ ಧನಂಜಯ ಗೌಡ, ಜನಾರ್ದನ ಗೌಡ, ರುಕ್ಮಿಣಿ ಇವರುಗಳ ಮನೆಗೆ ಭೇಟಿ ನೀಡಿ ಹಾನಿಗೀಡಾಗಿರುವ ಕೃಷಿಗಳ ಬಗ್ಗೆ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಹಮ್ಮಬ್ಬ ಸೌಕತ್, ದಯಾನಂದ ಸರೋಳಿ, ಹೇಮಂತ ಮತ್ತಿತರರು ಭೇಟಿ ನೀಡಿದರು.