ಉಪ್ಪಿನಂಗಡಿ: ಅನಾದಿ ಕಾಲದಿಂದಲೂ ಹಾಗೂ ಬೌಗೋಳಿಕವಾಗಿಯೂ ಅಸ್ತಿತ್ವದಲ್ಲಿದ್ದ ತೋಡೊಂದನ್ನು ತನ್ನ ವರ್ಗ ಭೂಮಿಯಲ್ಲಿದೆ ಎಂದು ಪ್ರತಿಪಾದಿಸಿ ಖಾಸಗಿ ವ್ಯಕ್ತಿಯೋರ್ವರು ಮಣ್ಣು ಹಾಕಿ ಮುಚ್ಚಿದ್ದರಿಂದ ಮಳೆಯ ನೀರು ಹರಿದು ಹೋಗಲಾಗದೆ ರಸ್ತೆಯೇ ಜಲಾವೃತಗೊಂಡು ಸಂಚಾರ ಅಸಾಧ್ಯವಾಗಿ ಜನಾಕ್ರೋಶ ವ್ಯಕ್ತಗೊಂಡ ಪರಿಣಾಮ ಆಡಳಿತ ವ್ಯವಸ್ಥೆ ಮಧ್ಯೆ ಪ್ರವೇಶಿಸಿ ಜೆಸಿಬಿ ಯಂತ್ರದ ಮೂಲಕ ತೋಡನ್ನು ಮತ್ತೆ ಬಿಡಿಸಿದ ಘಟನೆ ಉಪ್ಪಿನಂಗಡಿಯ ಪಂಚೇರಿನಲ್ಲಿ ನಡೆದಿದೆ.

ವ್ಯಕ್ತಿಯೋರ್ವರು ತನ್ನ ಜಾಗದಲ್ಲಿದ್ದ ತೋಡನ್ನು ಮುಚ್ಚಿದ್ದರಿಂದ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಿಂದ ಹಿರೇಬಂಡಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಪಂಚೇರು ಎಂಬಲ್ಲಿ ನೀರು ತುಂಬಿ ಸಂಪರ್ಕ ಕಡಿತಗೊಂಡಿತ್ತು. ತೋಡು ಮುಚ್ಚಿದ್ದರಿಂದ ನೀರೆಲ್ಲಾ ರಸ್ತೆಗೆ ನುಗ್ಗುತ್ತಿದ್ದು, ಪಕ್ಕದ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ರಸ್ತೆಯ ಎರಡೂ ಬದಿಯೂ ಎತ್ತರವಾಗಿರುವುದರಿಂದ ಇಲ್ಲಿ ಮಳೆ ನೀರು ಹೋಗಲು ಜಾಗವಿಲ್ಲದೆ ರಸ್ತೆಯಲ್ಲಿ ಸೊಂಟದಷ್ಟೆತ್ತರಕ್ಕೆ ನೀರು ನಿಲ್ಲುವಂತಾಗಿತ್ತು. ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದು ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ , ಪಂಚಾಯತ್ ಸದಸ್ಯರು ಸ್ಥಳಕ್ಕಾಗಮಿಸಿ ತೋಡು ಮುಚ್ಚಿದ ವ್ಯಕ್ತಿಯ ಹಕ್ಕುಸ್ಥಾಪನೆಯ ಧ್ವನಿಯನ್ನು ಕಡೆಗಣಿಸಿ ಜೆಸಿಬಿ ಯಂತ್ರದ ಮೂಲಕ ಮತ್ತೆ ರೋಡನ್ನು ನಿರ್ಮಿಸಲು ಮುಂದಾದರು ಹಾಗೂ ಸಾರ್ವಜನಿಕ ಸೊತ್ತಾಗಿರುವ ತೋಡನ್ನು ಮಣ್ಣು ಹಾಕಿ ಕಬಳಿಸಲು ಯತ್ನಿಸಿದ ಕೃತ್ಯವನ್ನು ಪೊಲೀಸ್ ಕ್ರಮಕ್ಕೆ ಒಳಪಡಿಸಲು ಸೂಚಿಸಿದರು. ಸಂಜೆಯಾಗುವಾಗ ತೋಡನ್ನು ಮರಳಿ ನಿರ್ಮಿಸುವ ಕಾರ್ಯ ನಡೆದಿದೆ.