ಉಪ್ಪಿನಂಗಡಿ ರಸ್ತೆಗೆ ನಾಮಕರಣ, ವೃತ್ತದಲ್ಲಿ ಪ್ರತಿಮೆ ಅನಾವರಣ
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲೂ ಪ್ರತಿಮೆ ಅನಾವರಣ
ಪುತ್ತೂರು: ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ 25 ವರ್ಷಗಳಿಗೂ ಹಿಂದೆ ದಕ್ಷಿಣ ಕನ್ನಡದಲ್ಲಿ ನಡೆದ ರೈತ ಬಂಡಾಯದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜಬೈದ್ಯ ಅವರ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿರಿಸುವ ಕುರಿತು ಉಪ್ಪಿನಂಗಡಿ ವೃತ್ತದಲ್ಲಿ ಪ್ರತಿಮೆ ಮತ್ತು ರಸ್ತೆಗೆ ಮಂಜಬೈದ್ಯ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ಅವರು ಮೇ.27ರಂದು ಮಂಜಬೈದ್ಯ ಅವರ ಹುತಾತ್ಮದಿನದಂದು ಪತ್ರಿಕಾಗೋಷ್ಟಿಯಲ್ಲಿ ಘೋಷಣೆ ಮಾಡಿದ್ದಾರೆ. ಇದರ ಜೊತೆಯಲ್ಲೇ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲೂ ಪ್ರತಿಮೆ ಅನಾವರಣ ಮಾಡುವ ಕುರಿತು ಆಲೋಚನೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಮಂಜಬೈದ್ಯ ಅವರು ವಿಶೇಷವಾದ ವ್ಯಕ್ತಿ. ಯಾಕೆಂದರೆ ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಬ್ರಿಟೀಷರ ಆಳ್ವಿಕೆಯಲ್ಲಿ ಕೃಷಿ ಫಲವಸ್ತು ಮೂಲಕ ಖಜಾನೆ ತುಂಬಿಸುತ್ತಿದ್ದ ಬ್ರಿಟೀಷರು ಬಳಿಕ ಅವರು ಹಣದ ರೂಪದಲ್ಲಿ ಖಾಜಾನೆ ತುಂಬಿಸುವ ಕಾನೂನು ಜಾರಿಗೆ ತಂದಾಗ ನಮ್ಮ ಉಪ್ಪಿನಂಗಡಿಯ ಬಿಲ್ಲವ ಸಮಾಜದ ಮಂಜಬೈದ್ಯ ಅವರು ಇದರ ವಿರುದ್ಧ ಹೋರಾಟವನ್ನು ಆರಂಭಿಸಿದರು. ಬ್ರಿಟೀಷರ ಉಪ್ಪಿನಂಗಡಿ ಖಜಾನೆಯಲ್ಲೇ ಗುಮಾಸ್ತನಾಗಿ ಕೆಲಸ ಮಾಡಿಕೊಂಡು ಇಂಗ್ಲೀಷ್ ಬಲ್ಲವರಾಗಿದ್ದರು. ಇದೆ ಸಂದರ್ಭ ಕೊಡಗಿನ ಪಾಳೆಗಾರ ಕಲ್ಯಾಣಪ್ಪನನ್ನು ಮುಂದಿಟ್ಟುಕೊಂಡು ನಡೆಯುವ ದಂಗೆಯನ್ನು ಅಮರ ಸುಳ್ಯ ದಂಗೆ ಎಂದೂ, ಕಲ್ಯಾಣಪ್ಪನ ಕಾಟುಕಾಯಿ ಎಂದೂ ಕರೆಯುತ್ತಾರೆ. ಜಿಲ್ಲೆಯ ನೂರಾರು ಮಂದಿ ಯೋಧರಾಗಿ ಇದರಲ್ಲಿ ಪಾಲ್ಗೊಂಡಿದ್ದರು. ಪುತ್ತೂರಿಗೆ ಕಲ್ಯಾಣಪ್ಪನ ಸೈನ್ಯ ಬಂದ ಸುದ್ದಿ ಕೇಳಿ ಉಪ್ಪಿನಂಗಡಿ ತಾಲೂಕು ಕಚೇರಿಯಲ್ಲಿದ್ದವರನ್ನೆಲ್ಲ ಬಂಧಿಸಿ ಖಜಾನೆಯ ಬೀಗ ಒಡೆದು ಅಲ್ಲಿದ್ದ ಸೊತ್ತನ್ನು ಪುತ್ತೂರಿಗೆ ತಂದು ಕಲ್ಯಾಣಪ್ಪನಿಗೆ ಒಪ್ಪಿಸಿ ಸೈನ್ಯಕ್ಕೆ ಸೇರಿದ. ಕಲ್ಯಾಣಪ್ಪ ಅವರು ಇಂಗ್ಲೀಷ್ ಬಲ್ಲವನಾದ ಮಂಜಬೈದ್ಯನನ್ನು ಉಪದಂಡನಾಯಕನನ್ನಾಗಿ ನೇಮಿಸಿದರು. ಅಲ್ಲಿಂದ ಕಲ್ಯಾಣಪ್ಪ ದಂಡನಾಯಕರೊಂದಿಗೆ ಮಂಜಬೈದ್ಯ ಮತ್ತು ರಾಮಗೌಡರು ಜೊತೆಯಾಗಿ ಮುಂದೆ ಸಾಗಿದರು.
1837ರ ಎಪ್ರಿಲ್ 5 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದ ಕ್ರಾಂತಿವೀರರು ಅಲ್ಲಿ ಬ್ರಿಟೀಷ್ ಧ್ವಜ ಇಳಿಸಿ ಕ್ರಾಂತಿಕಾರಿ ಧ್ವಜ ಹಾರಿಸಿದರು. ಹದಿಮೂರು ದಿನಗಳ ಕಾಲ ದಕ್ಷಿಣ ಕನ್ನಡ ಬ್ರಿಟೀಷ್ ಮುಕ್ತವಾಗಿತ್ತು. ಮುಂದೆ ಈ ಕೆನರಾ ದಂಗೆಯನ್ನು ಬ್ರಿಟಿಷ್ ಸೈನ್ಯ ಹತ್ತಿಕ್ಕಿತು. ಈ ಸಂದರ್ಭ ಬಂಧಿಸಲ್ಪಟ್ಟ ಹೋರಾಟಗಾರರಲ್ಲಿ ಉಪ್ಪಿನಂಗಡಿಯ ಮಂಜ ಬೈದ್ಯನೂ ಒಬ್ಬನಾಗಿದ್ದು, ಬ್ರಿಟೀಷ್ ಆಡಳಿತ ಕೋರ್ಟ್ ಮಾರ್ಷಲ್ ನಡೆಸಿ, ಉಪ್ಪಿನಂಗಡಿ ಮಂಜಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ, ಪುಟ್ಟಬಸಪ್ಪ, ನಂದಾವರ ಲಕ್ಷ್ಮಪ್ಪ, ಬಂಗರಸರಿಗೆ ಗಲ್ಲು ಶಿಕ್ಷೆ ವಿಧಿಸಿತು. 1837ರ ಮೇ 27 ರಂದು ಮಂಗಳೂರಿನಲ್ಲಿ ಉಪ್ಪಿನಂಗಡಿ ಮಂಜಬೈದ್ಯನನ್ನು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಆ ಶವ ಗಲ್ಲುಗಂಬದಲ್ಲೇ ಕೊಳೆತು ಬೀಳುವಂತೆ ಮಾಡಿದ್ದರು. ಇವತ್ತಿಗೆ ಅವರು ಗಲ್ಲಿಗೇರಿ 188 ವರ್ಷಗಳಾಗಿದೆ. ನಾವೆಲ್ಲ ದೇಶದ ಕುರಿತು ಮಾತನಾಡುತ್ತೇವೆ, ದೇಶದ ಹಿತಾಸಕ್ತಿಯ ಕುರಿತು ಮಾತನಾಡುತ್ತೇವೆ. ಆದರೆ ನಮ್ಮ ಉಪ್ಪಿನಂಗಡಿಯ ಮಂಜಬೈದ್ಯನ ಪರವಾಗಿ ಊರಿನ ರಸ್ತೆಯಲ್ಲಿ ಹೆಸರಿಲ್ಲ, ಒಂದು ಪ್ರತಿಮೆ ಇಲ್ಲ. ಈಗಾಗಲೇ ಮಂಗಳೂರಿನಲ್ಲಿ ರಾಮಯ್ಯ ಗೌಡರ ಪ್ರತಿಮೆ ಸ್ಥಾಪಿಸಲಾಗಿದೆ. ಅದೇ ರೀತಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಜಬೈದ್ಯರವರ ಪ್ರತಿಮೆ ಅನಾವರಣ ಮಾಡಬೇಕೆಂಬ ಕನಸಿದೆ. ಒಳ್ಳೆಯ ರಸ್ತೆಗಳಿಗೆ ಹೆಸರು ಇಡುವ ಕನಸು ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಉಪ್ಪಿನಂಗಡಿಯಲ್ಲಿ ದೊಡ್ಡ ವೃತ್ತ ನಿರ್ಮಾಣ ಆಗಲಿದೆ .ಆ ಸಂದರ್ಭ ಅಲ್ಲಿ ವೃತ್ತದ ನಡುವೆ ಮಂಜಬೈದ್ಯರ ಪ್ರತಿಮೆ ಮತ್ತು ವೃತ್ತಕ್ಕೆ ಮಂಜಬೈದ್ಯರ ಹೆಸರನ್ನು ನಾಮಕರಣ ಮಾಡುವುದು ಹಾಗು ಗೆಜ್ಜೆಗಿರಿ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯವನ್ನು ಸೇರಿಸಿ ಆ ಭಾಗದವರಿಂದ ಅನುಮತಿ ಪಡೆದು ಅಲ್ಲಿಯೂ ಮಂಜಬೈದ್ಯರವರ ಪ್ರತಿಮೆ ಅನಾವರಣ ಮಾಡುವ ಆಲೋಚನೆಯಲ್ಲಿದ್ದೇವೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವಾ, ವಿಟ್ಲ ಬ್ಲಾಕ್ ಅಧ್ಕಕ್ಷ ಪದ್ಮನಾಭ ಪೂಜಾರಿ, ಪಕ್ಷದ ಹಿರಿಯ ಮುಖಂಡರಾದ ಎಂ.ಎಸ್. ಮಹಮ್ಮದ್ ಉಪಸ್ಥಿತರಿದ್ದರು.