ವಿಟ್ಲ: ಬೈಕ್ ನಲ್ಲಿ ಬಂದ ತಂಡವೊಂದು ಪಿಕಪ್ ವಾಹನದಲ್ಲಿ ಸಂಚರಿಸುತ್ತಿದ್ದವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮೇ.27ರಂದು ನಡೆದಿದ್ದು, ಘಟನೆಯಿಂದಾಗಿ ಪಿಕಪ್ ವಾಹನವನ್ನು ಚಲಾಯಿಸುತ್ತಿದ್ದಾತ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕ ರಹೀಂ ಕೊಲೆಯಾದ ವ್ಯಕ್ತಿ. ಈತ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡಿ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ರಹೀಂ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಇನ್ನೋರ್ವನ ಮೇಲೂ ದಾಳಿ ನಡೆಸಲಾಗಿದ್ದು, ಆತನ ಕೈ ಭಾಗಕ್ಕೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.