ಪುತ್ತೂರು: ಮಳೆಯ ಸಂದರ್ಭ ಪ್ರತಿ ವರ್ಷದಂತೆ ಪುತ್ತೂರು ಬೈಪಾಸ್ ರಸ್ತೆಯಲ್ಲಿನ ಗುಡ್ಡವೊಂದು ಈ ಭಾರಿಯೂ ಕುಸಿಯುವ ಭೀತಿಯಲ್ಲಿದ್ದು, ರಾತ್ರಿ ಸಮಯ ಬೈಪಾಸ್ ರಸ್ತೆಯ ಬದಲು ಬದಲಿ ರಸ್ತೆ ಬಳಸುವಂತೆ ಪುತ್ತೂರು ಪೊಲೀಸರು ಮಂಜಲ್ಪಡ್ಪು ಬೈಪಾಸ್ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

ಬೈಪಾಸ್ ರಸ್ತೆಯ ನೂಜಿಯಲ್ಲಿ ಕಳೆದ ವರ್ಷ ಗುಡ್ಡ ಕುಸಿತಗೊಂಡು ರಸ್ತೆ ಮುಚ್ಚಿ ಹೋಗಿತ್ತು. ಈ ಬಾರಿಯೂ ಭಾರಿ ಮಳೆ ಸುರಿಯುತ್ತಿರುವ ನಿಟ್ಟಿನಲ್ಲಿ ಗುಡ್ಡ ಅಲ್ಲಲ್ಲಿ ಕುಸಿಯುತ್ತಿದ್ದು ಅನಾಹುತ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬೈಪಾಸ್ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ಓಡಾಟದಲ್ಲಿ ಬದಲಾವಣೆ ತಂದಿದ್ದಾರೆ. ರಾತ್ರಿ ಸಮಯ ವಾಹನ ಸವಾರರು ಪುತ್ತೂರು ಪೇಟೆ ಮಾರ್ಗವನ್ನೇ ಬಳಸುವ ಮೂಲಕ ಅಪಾಯವನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.