ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 2025-26ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಶಾಲಾ ಸಭಾಭವನದಲ್ಲಿ ಜರಗಿತು.
ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿನಿಯರನ್ನು ಶಾಲಾ ವಾದ್ಯ-ವೃಂದದೊಂದಿಗೆ ಶಾಲಾ ಸಭಾಭವನಕ್ಕೆ ಕರೆತರಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನ್ಹಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ವಿದ್ಯಾರ್ಥಿಗಳು ದುರ್ಜನರ ಸಹವಾಸ ತೊರೆದು, ಸಜ್ಜನರ ಸಂಘ ಮಾಡಿ ತಮ್ಮ ತಂದೆ ತಾಯಿ ಹಾಗೂ ಹಿರಿಯರ ಅನುಭವಿ ಜೀವನದ ಮಾರ್ಗದರ್ಶನದ ಮೂಲಕ ಜೀವನದಲ್ಲಿ ಯಶಸ್ಸು ಲಭಿಸಲಿ ಎಂದು ಆಶೀರ್ವದಿಸಿದರು.

ಸಹಾಯಕ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧಕ್ಷ ಜೆರಾಲ್ಡ್ ಡಿಕೋಸ್ಟ, ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ, ಎಂಟನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿ ಪ್ರತಿನಿಧಿಗಳಾದ ಈಶ್ವರಿ, ಖದೀಜ ಸುಲ್ತಾನ, ಜ್ಯಾಕ್ಲಿನ್ ಫೆರಾವೋ ಹಾಗೂ ಶಾಲಾ ಉಪನಾಯಕಿ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನಾ ವಿಧಿಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶಾಲಾ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನ್ಹಸ್ ವಿದ್ಯಾರ್ಥಿನಿಯರಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕ ವಿತರಿಸಿದರು. ಮುಖ್ಯ ಶಿಕ್ಷಕಿ ರೋಸ್‌ಲಿನ್ ಲೋಬೊ ಸ್ವಾಗತಿಸಿ, ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಶಿಕ್ಷಕಿ ರೀನಾ ತೆರೆಜ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.