ಅಂದ್ರಟ್ಟ ಬ್ರಿಡ್ಜ್:ಕೊನೆಗೂ ಬಾಕಿ ಕಾಮಗಾರಿ ಆರಂಭ

0

ಪುತ್ತೂರು:ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟದಲ್ಲಿ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆ ನಿರ್ಮಿಸಲಾಗಿದ್ದರೂ ಬಾಕಿ ಕಾಮಗಾರಿ ಅಪೂರ್ಣವಾಗಿತ್ತು.ಗ್ರಾಮಸ್ಥರ ತರಾಟೆಯ ನಂತರ,ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕನಿಷ್ಕ ಅವರು ಕೊಟ್ಟ ಮಾತಿನಂತೆ ಜೂ.3ರಿಂದ ಕೆಲಸಗಳು ಮತ್ತೆ ಆರಂಭಗೊಂಡಿದೆ.ಸ್ವತಃ ಕನಿಷ್ಕ ಅವರೇ ಸ್ಥಳಕ್ಕೆ ಆಗಮಿಸಿ ಕೆಲಸ ಕಾರ್ಯಗಳನ್ನು ಪರಿಶೀಲಿಸುತ್ತಿದ್ದಾರೆ.


ಉಡುಪಿ ಮೂಲದ ಕೇದಾರನಾಥ ಕನ್‌ಸ್ಟ್ರಕ್ಷನ್ಸ್‌ನ ಕೃಷ್ಣಮೂರ್ತಿ ಭಟ್ ಅವರಿಗೆ ಅಂದ್ರಟ್ಟ ಬ್ರಿಡ್ಜ್ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು,ಜುನೈದ್ ಎಂಬವರು ಸಬ್ ಕಾಂಟ್ರಾಕ್ಟ್ ವಹಿಸಿಕೊಂಡಿದ್ದಾರೆ.ಅದರಂತೆ, ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಸಂಪರ್ಕ ಕಲ್ಪಿಸಿರಲಿಲ್ಲ.ತಡೆಗೋಡೆ ಮತ್ತು ಮೋರಿ ನಿರ್ಮಾಣ ಕಾಮಗಾರಿಯೂ ಆಗಿರಲಿಲ್ಲ.ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದ್ದಲ್ಲದೆ, ನದಿ ನೀರು ತೋಟಗಳಿಗೆ ನುಗ್ಗಿತ್ತು.ಇಂತಹ ಸಂದರ್ಭದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧಕ್ಕೆ ಬಿಟ್ಟು ಹೋಗಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತಲ್ಲದೆ ಆಕ್ರೋಶಕ್ಕೂ ಕಾರಣವಾಗಿತ್ತು.ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಮಾಹಿತಿ ನೀಡಿದ್ದರು.ಅದರಂತೆ, ಸ್ಥಳಕ್ಕೆ ಆಗಮಿಸಿದ್ದ ಇಂಜಿನಿಯರ್ ಕನಿಷ್ಕ ಅವರು ಪರಿಶೀಲನೆ ನಡೆಸಿದ್ದರು.ಸಬ್ ಕಾಂಟ್ರಾಕ್ಟರ್ ಕೂಡ ಜೊತೆಗಿದ್ದರು.ಈ ವೇಳೆ, ಕಾಮಗಾರಿ ಪೂರ್ಣಗೊಳಿಸದೇ ಸಬೂಬು ಹೇಳುತ್ತಿದ್ದರೆಂದು ಸಬ್ ಕಾಂಟ್ರಾಕ್ಟರ್ ವಿರುದ್ಧ ಸ್ಥಳೀಯ ಮುಖಂಡರು ತೀವ್ರ ಅಸಮಾಧಾನ ಹೊರಹಾಕಿದ್ದರು.ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಂಡ ಕನಿಷ್ಕ ಅವರು, ಸೋಮವಾರ(ಜೂ.3)ದಿಂದ ಕಾಮಗಾರಿ ಆರಂಭಿಸುವ ಬಗ್ಗೆ ಹಾಗೂ ತಾನೇ ಮುಂದೆ ನಿಂತು ಕೆಲಸ ಮಾಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.ಈ ಬಗ್ಗೆ ಪತ್ರಿಕೆಯಲ್ಲಿ ವರದಿಯೂ ಪ್ರಕಟವಾಗಿತ್ತು.ಇದೀಗ, ಕೊಟ್ಟ ಮಾತಿನಂತೆ ನಡೆದುಕೊಂಡ ಇಂಜಿನಿಯರ್ ಕನಿಷ್ಕ ಹಾಗೂ ಸಬ್ ಕಾಂಟ್ರಾಕ್ಟರ್ ಜುನೈದ್ ಅವರು ಸೋಮವಾರದಿಂದ ಕಾಮಗಾರಿಯನ್ನು ಮತ್ತೆ ಆರಂಭಿಸಿದ್ದಾರೆ.ಜೆಸಿಬಿ ಸಹಿತ ಸ್ಥಳಕ್ಕೆ ಆಗಮಿಸಿದ ಕೆಲಸಗಾರರು ರಸ್ತೆಗೆ ಜಲ್ಲಿ ಹಾಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.


ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕಾರ್ತಿಕ್ ಗೌಡ ಅಂದ್ರಟ್ಟ, ಯಾವುದೇ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡ ನಂತರ ಪೂರ್ಣಗೊಳಿಸಬೇಕು.ಸಾರ್ವಜನಿಕರು ಪರದಾಡುವಂತಹ ಸ್ಥಿತಿ ಬರಬಾರದು.ಕೊಟ್ಟ ಮಾತಿನಂತೆ ಇಂಜಿನಿಯರ್ ಮತ್ತು ಸಬ್ ಕಾಂಟ್ರಾಕ್ಟರ್ ನಡೆದುಕೊಂಡಿದ್ದಾರೆ.ಇದು ನಮಗೆ ಸಂತಸ ತಂದಿದೆ.ಕಳಪೆ ಕಾಮಗಾರಿ ಆಗಬಾರದು. ಇಂಜಿನಿಯರ್ ಸೂಚನೆಯಂತೆ ಅಚ್ಚುಕಟ್ಟಾಗಿ ಕಾಮಗಾರಿಯನ್ನು ನಡೆಸಬೇಕು.ಅಚ್ಚುಕಟ್ಟಾಗಿ ಕಾಮಗಾರಿಗಳನ್ನು ನಡೆಸಿ ಮಳೆ ಆರಂಭಕ್ಕೂ ಮುನ್ನ ಬ್ರಿಡ್ಜ್ ಬಿಟ್ಟುಕೊಡಬೇಕು ಎಂದರು.

LEAVE A REPLY

Please enter your comment!
Please enter your name here