ಕಡಬ: ರಾಜ್ಯ ಮತ್ತು ದೇಶದ ಕಾನೂನಿನನ್ವಯ ಅಂತೆಯೇ ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಮತ್ತಿತರ ಹಬ್ಬದ ಸಂಧರ್ಭಗಳಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕೆಂದು ಕಡಬ ಪ್ರಖಂಡ ವಿ.ಹಿಂ.ಪ. ವತಿಯಿಂದ ಕಡಬ ಠಾಣೆಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ಕೊಟ್ಟ ಸ್ಥಳವನ್ನು ಸರಕಾರ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲಿ (ಕುರ್ಬಾನಿ ) ನಿಷೇಧವಿರುತ್ತದೆ. ಕಾಲ ಕಾಲಕ್ಕೆ ಸರಕಾರ ವಿವಿಧ ಆದೇಶಗಳಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿ ಕಟ್ಟುನಿಟ್ಟಾಗಿ ತಡೆಯಲು ನಾವು ಮನವಿ ಮಾಡುತ್ತಿದ್ದೇವೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರ ಸಾಗಾಟವಾಗದಂತೆ ನಾಕಾ ಬಂದಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿ ಇಡದಂತೆ, ಮೇಯಲು ಬಿಡದಂತೆ, ಸೂರ್ಯಾಸ್ತದಿಂದ ಸೂರ್ಯೋದಯವರೆಗೆ ಕಾಲ್ನಡಿಗೆಯಲ್ಲಿ ಜಾನುವಾರು ಸಾಗಾಟ ನಿಷೇಧವಿದ್ದು ಹಾಗಾಗಿ ಈ ಸಮಯದಲ್ಲಿ ಸಾಗಾಟ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಉಲ್ಲಂಘಿಸಿ ಕಿವಿಯೋಲೆ ಇಲ್ಲದೆ ಶೇಖರಿಸಿಟ್ಟ, ಮೇಯಲು ಬಿಟ್ಟ ಜಾನುವಾರುಗಳನ್ನು ವಶಪಡಿಸಿ, ಜಾನುವಾರು ನಿಷೇಧ ಕಾಯಿದೆ 2020 ರಂತೆ ಪ್ರಕರಣ ದಾಖಲಿಸಬೇಕು. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಗಳ ನಿಗಾ ಇಡುತ್ತಾ, ಪ್ರಾರ್ಥನಾ ಮಂದಿರಗಲ್ಲಿಯೂ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸೂಚಿಸಬೇಕು. ಕಾಯಿದೆಯಂತೆ ಜಾನುವಾರು ಹತ್ಯೆ ತಡೆಯುವ ಅಧಿಕಾರ ಸಾರ್ವಜನಿಕರಿಗೂ ಇದ್ದು ಮೊದಲೇ ಪೊಲೀಸರು ಅಕ್ರಮ ಜಾನುವಾರು ಸಾಗಾಟ, ಶೇಖರಣೆ, ಹತ್ಯೆ ತಡೆಯಲು ಸಾರ್ವಜನಿಕರು ಅಧಿಕಾರ ಉಪಯೋಗಿಸಲು ಅವಕಾಶ ಸಿಗದಂತೆ ಎಚ್ಚರ ವಹಿಸಬೇಕು. ಈ ಎಲ್ಲ ಕಾರ್ಯಗಳಲ್ಲಿ ಕಾನೂನು ಬದ್ಧವಾಗಿ ತಮಗೆ ಸಹಕರಿಸಲು ನಮ್ಮ ಕಾರ್ಯಕರ್ತರು ಸದಾ ಸಿದ್ಧರಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಿಹಿಂಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ಬಜರಂಗದಳ ಕಡಬ ಪ್ರಖಂಡ ಸಂಯೋಜಕ ಅಶ್ವಿತ್ ಕಂಡಿಗ, ಕಡಬ ಪ್ರಖಂಡ ದುರ್ಗಾವಾಹಿನಿ ಸಂಯೋಜಕಿ ದೇವಕಿ ಪೂವಳ, ಮಾತೃ ಶಕ್ತಿ ಸಹ ಸಂಯೋಜಕಿ ವೀಣಾ ರಮೇಶ್ ಹಾಗೂ ಸುಖೇಶ್ ಕುಮಾರ್ ಹಳೆಸ್ಟೇಷನ್ ಮೊದಲಾದವರು ಉಪಸ್ಥಿತರಿದ್ದರು. ಕಡಬ ಠಾಣಾ ತನಿಖಾ ಎಸ್.ಐ. ಅಕ್ಷಯ್ ಢವಗಿ ಮನವಿ ಸ್ವೀಕರಿಸಿದರು.