ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಇದೇ ಆಗಸ್ಟ್ 15ರಿಂದ ನೀರಿನ ಬಾಟಲ್ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆ.15ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯ ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚಿಸಿದರು. ಈ ಆದೇಶ ಜಾರಿಗೆ 2 ತಿಂಗಳು ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ಪದಾರ್ಥಗಳನ್ನು ತೆಗೆದುಕೊಂಡಿದ್ದರೆ ಅದನ್ನು ಬಳಕೆ ಮಾಡಬಹುದು. ಆ.15ರಿಂದ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಅರ್ಚಕರಿಗೆ ತಸ್ತೀಕ್ ನೇರವರ್ಗಾವಣೆ:
ಅರ್ಚಕರಿಗೆ ತಸ್ತೀಕ್ ನೇರ ವರ್ಗಾವಣೆ(ಡಿಬಿಟಿ)ಮೂಲಕ ನೀಡಲು ಕ್ರಮಕೈಗೊಳ್ಳಲಾಗುವುದು. ಈಗ 25 ಸಾವಿರ ಅರ್ಚಕರ ಪೈಕಿ 14 ಸಾವಿರ ಅರ್ಚಕರು ಮಾಹಿತಿ ಕೊಟ್ಟಿದ್ದಾರೆ.ಉಳಿದವರು ಬೇಗ ಮಾಹಿತಿ ಕೊಟ್ಟರೆ ಅವರಿಗೂ ಡಿಬಿಟಿ ಮೂಲಕವೇ ತಸ್ತೀಕ್ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ದೇವಾಲಯಗಳ ಜಾಗ ಮೂರು ತಿಂಗಳೊಳಗೆ ಸರ್ವೆ:
ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಮಾಹಿತಿಯನ್ನು 3 ತಿಂಗಳ ಒಳಗೆ ಕೊಡಬೇಕು. 3 ತಿಂಗಳ ಒಳಗೆ ಬಾಕಿ ಇರುವ 20 ಸಾವಿರ ಎಕರೆ ದೇವಾಲಯ ಜಮೀನು ಇಂಡೀಕರಣ ಆಗಬೇಕು.
ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಗಳನ್ನು ಪ್ರತ್ಯೇಕ ಸರ್ವೆ ಮಾಡಬೇಕು. ದೇವಸ್ಥಾನದ ಹೆಸರಿನಲ್ಲಿ ಖಾತೆ, ಆಸ್ತಿ ಪತ್ರ ದಾಖಲೆಗಳು ಸರಿಯಾಗಿ ಇರದಿದ್ದರೆ ಎಲ್ಲಾ ದೇವಾಲಯದ ಜಾಗ 3 ತಿಂಗಳ ಒಳಗಡೆ ಸರ್ವೆ ಮಾಡಿ ನೋಟಿಫಿಕೇಶನ್ ಮಾಡಲು ಸಚಿವರು ಸೂಚನೆ ನೀಡಿದರು. ಚಾಮುಂಡೇಶ್ವರಿ ಬೆಟ್ಟದಲ್ಲಿ ಒತ್ತುವರಿ ಆಗಿದ್ದ 11 ಎಕರೆ ಜಾಗವನ್ನು ತೆರವು ಮಾಡಲಾಗಿದೆ. ಉಳಿದ ಜಾಗ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಕಳೆದ 3 ತಿಂಗಳಲ್ಲಿ 1,253 ದೇವಾಲಯಗಳನ್ನು ಗುರುತಿಸಲಾಗಿದೆ. 11,332 ಆಸ್ತಿ ಗುರುತಿಸಿ ನಮೂದಿಸಲಾಗಿದೆ ಎಂದು ಸಚಿವರು ತಿಳಿಸಿದರು.
31 ಜಿಲ್ಲೆಗಳಲ್ಲೂ ಧಾರ್ಮಿಕ ಪರಿಷತ್ ರಚನೆ ಶೀಘ್ರ:
ಪ್ರಸ್ತುತ ರಾಜ್ಯದ 8 ಜಿಲ್ಲೆಗಳಲ್ಲಿ ಮಾತ್ರವೇ ಧಾರ್ಮಿಕ ಪರಿಷತ್ ರಚನೆಯಾಗಿದ್ದು 31 ಜಿಲ್ಲೆಗಳಲ್ಲಿಯೂ ಧಾರ್ಮಿಕ ಪರಿಷತ್ ರಚನೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ:
ದೇವಾಲಯದ ಅರ್ಚಕರ 249 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಅರ್ಚಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ 34,37,000ರೂ. ಬಿಡುಗಡೆಗೊಳಿಸಲಾಗಿದೆ. ಮರಣ ಹೊಂದಿದ 7 ಅರ್ಚಕರ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ಮರಣೋತ್ತರ ಪರಿಹಾರ 14ಲಕ್ಷ ರೂಪಾಯಿ ನೀಡಲಾಗಿದೆ ಎಂದರು.