ರಾಮಕುಂಜ: ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿರುವ ಉಳ್ಳಾಕ್ಲು ಮತ್ತು ಅಣ್ಣಪ್ಪ ಸ್ವಾಮಿ ದೈವಸ್ಥಾನದ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜೂ.10ರಂದು ರಾತ್ರಿ ನಡೆದಿದೆ.
ಹನುಮಂತರಾಯ ಯಾನೆ ಗೌಡನ ಗೌಡ ಬಂಧಿತ ಆರೋಪಿ. ನೆಕ್ಕರೆ ಉಳ್ಳಾಕ್ಲು ಮತ್ತು ಅಣ್ಣಪ್ಪ ಸ್ವಾಮಿ ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಲಂಕಾರು ಗುತ್ತುಮನೆ ನಿವಾಸಿ ಕೀರ್ತಿ ಅವರು ಜೂ.೧೦ರಂದು ರಾತ್ರಿ ದೈವಸ್ಥಾನದ ಬಳಿ ಹೋದಾಗ ಆರೋಪಿ ದೈವಸ್ಥಾನದ ಬಾಗಿಲು ಬೀಗ ಒಡೆಯಲು ಪ್ರಯತ್ನಿಸುತ್ತಿದ್ದ. ಈ ಬಗ್ಗೆ ಕೀರ್ತಿ ಅವರು ಸಂತೋಷ ಎಂಬವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದು ಅವರು ಬಂದ ನಂತರ ಬಾಗಿಲು ಒಡೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ವಿಚಾರಿಸಿದಾಗ ಹನುಮಂತರಾಯ ಯಾನೆ ಗೌಡನ ಗೌಡ ಎಂದು ತಿಳಿಸಿದ್ದು ವಿಳಾಸ ಕೇಳಿದಾಗ ಯಾವುದೇ ಉತ್ತರ ನೀಡಿಲ್ಲ. ಬಳಿಕ ಅವರು ಆರೋಪಿಯನ್ನು ಕಡಬ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕೀರ್ತಿ ಅವರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಕಲಂ: 331(4),305,62 BNS-2023 ರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.