





ಉಪ್ಪಿನಂಗಡಿ: ಇಲ್ಲಿನ ಪಂಜಳ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಒಂಟಿ ಮೊಸಳೆಯೊಂದು ಶನಿವಾರ ಕಾಣಿಸಿಕೊಂಡಿದ್ದು, ಉಪ್ಪಿನಂಗಡಿ ಪರಿಸರದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡಲ್ಲೂ ಮೊಸಳೆಗಳು ಕಾಣಿಸಿ ಜನರನ್ನು ಭಯಭೀತಗೊಳಿಸಿವೆ.


ಕೆಲ ದಿನಗಳ ಹಿಂದೆ ಕುಮಾರಧಾರಾ ನದಿಯ ನೆಕ್ಕಿಲಾಡಿ ಭಾಗದ ದಡದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ವಿಶ್ರಾಂತಿ ಪಡೆಯುತ್ತಿದ್ದು, ಜನ ಸಮೂಹವನ್ನು ಕಂಡು ಮೊಸಳೆಯು ನದಿಗಿಳಿದಿದ್ದ ಘಟನೆಯ ಬೆನ್ನಲ್ಲೇ ಇದೀಗ ಶನಿವಾರದಂದು ಪಂಜಳದಲ್ಲಿ ಸಣ್ಣ ಗಾತ್ರದ ಮೊಸಳೆಯು ಕಾಣಿಸಿಕೊಂಡಿದೆ.





ಉಪ್ಪಿನಂಗಡಿ ಪರಿಸರದ ನೇತ್ರಾವತಿಯ ಒಡಲಿನಲ್ಲಿ ಮೊಸಳೆಯ ಇರುವಿಕೆ ಇತ್ತೀಚಿನ ಮೂರು ವರ್ಷಗಳಲ್ಲಿ ಗೋಚರಿಸುತ್ತಿದ್ದು, ವರ್ಷದ ಎಲ್ಲಾ ದಿನಗಳಲ್ಲಿ ನದಿ ತುಂಬಾ ನೀರಿರುವುದರಿಂದ ಮೊಸಳೆಗಳು ತನ್ನ ಖಾಯಂ ವಾಸ ಸ್ಥಳವನ್ನು ಇಲ್ಲಿಗೆ ಸ್ಥಳಾಂತರಿಸಿರುವ ಸಾಧ್ಯತೆ ಇದೆ. ಒಟ್ಟಾರೆ ಅಲ್ಲಲ್ಲಿ ಮೊಸಳೆಗಳು ಕಾಣಿಸಿರುವುದರಿಂದ ನೇತ್ರಾವತಿ ನದಿಯಲ್ಲಿನ ನೀರಾಟ ಇನ್ನು ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗುವ ಭೀತಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.










