ಡಾ.ಅಜಯ್, ಸೃಜನ್ ಊರುಬೈಲು, ರಝಾಕ್ ಪುತ್ತೂರು, ಡಾ.ನಾಗಶ್ರೀ ಶಂಕರ್, ಸುಂದರ್ ರೈ ಮಂದಾರರವರಿಗೆ ಸನ್ಮಾನ
ಪುತ್ತೂರು: ಜು.1ರಂದು ಆಚರಿಸಲ್ಪಡುವ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಪ್ರಯುಕ್ತ ದರ್ಬೆ ನಯಾ ಚಪ್ಪಲ್ ಬಜಾರ್ ಮಳಿಗೆಯಲ್ಲಿ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಪ್ರಯುಕ್ತ ಈರ್ವರು ವೈದ್ಯರು, ಓರ್ವ ಪತ್ರಕರ್ತ, ಈರ್ವರು ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜನರನ್ನು ಪ್ರೀತಿಯಿಂದ ನೋಡುವುದೇ ಮಾನವತೆಯ ಸಂಕೇತ-ಡಾ.ಶ್ರೀಪ್ರಕಾಶ್ ಬಿ:
ರೋಟರಿ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಮಾತನಾಡಿ, ಯಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೋ ಅವರನ್ನು ನಾವು ಗೌರವದಿಂದ ಕಾಣುವುದು ಬಹಳ ಮುಖ್ಯವಾಗಿದೆ. ಇಂದಿಲ್ಲಿ ಸನ್ಮಾನಗೊಂಡವರೆಲ್ಲಾ ದಿಗ್ಗಜರೇ ಮಾತ್ರವಲ್ಲ ಈ ಮಳಿಗೆಯ ಮಾಲಕ ರಫೀಕ್ ಎಂ.ಜಿರವರು ಈಗಾಗಲೇ ಅನೇಕರನ್ನು ಗುರುತಿಸಿ ಅಭಿನಂದಿಸಿ ಅವರುಗಳ ಕಾಯಕಕ್ಕೆ ಗೌರವ ಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಆದ್ದರಿಂದ ಜನರನ್ನು ಪ್ರೀತಿಯಿಂದ ನೋಡುವುದೇ ಮಾನವತೆಯ ಸಂಕೇತವಾಗಿದೆ ಎಂದರು.

ವೈದ್ಯರು, ಪತ್ರಕರ್ತರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು-ಹೇಮಾ ಜಯರಾಂ:
ಟಿ.ವಿ ನಿರೂಪಕಿ ಹಾಗೂ ಪತ್ರಕರ್ತೆ ಹೇಮಾ ಜಯರಾಂ ಮಾತನಾಡಿ, ಸಮಾಜದಲ್ಲಿ ವೈದ್ಯರು ಒಂದು ವಿಧದಲ್ಲಿ ಚಿಕಿತ್ಸೆ ನೀಡುವವರಾದರೆ, ಪತ್ರಕರ್ತರು ಮತ್ತೊಂದು ವಿಧದಲ್ಲಿ ಕಾರ್ಯ ನಿರ್ವಹಿಸುವವರಾಗಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಈ ಗ್ರಾಮೀಣ ಭಾಗದಲ್ಲಿ ಡಾ.ಯು.ಪಿ ಶಿವಾನಂದರು ಓರ್ವ ವೈದ್ಯರಾಗಿದ್ದುಕೊಂಡು ಪತ್ರಿಕಾ ಕ್ಷೇತ್ರವನ್ನು ಆರಿಸಿರುವುದು ಅವರಿಗಿರುವ ಸಮಾಜದ ಮೇಲಿನ ಕಾಳಜಿ ಮೆಚ್ಚುವಂತಹುದು. ವೈದ್ಯಲೋಕದಲ್ಲಿ ವೈದ್ಯರುಗಳು ರೋಗಿಗಳಿಗೆ ನೀಡುವ ನಗುಮುಖದ ಸೇವೆಯೇ ಶ್ರೀರಕ್ಷೆಯಾಗಿದ್ದು, ಇದು ರೋಗಿಯಲ್ಲಿ ಮಾನಸಿಕವಾಗಿ ಚೇತರಿಕೆ ಕಾಣಲು ಸಾಧ್ಯವಾಗುತ್ತದೆ. ಕಲಾವಿದರು ತಮ್ಮ ಅಭಿನಯದ ಮೂಲಕ ನಮ್ಮನ್ನು ಮತ್ತೊಂದು ಪ್ರಪಂಚಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದವರಾಗಿದ್ದಾರೆ ಎಂದರು.
ನಮ್ಮನ್ನು ಗುರುತಿಸಿದ್ದಕ್ಕೆ ಗೌರವ ಭಾವದ ಕೃತಜ್ಞತೆಗಳು-ಡಾ.ನಾಗಶ್ರೀ ಎಸ್.ಶಂಕರ್:
ಸನ್ಮಾನಿತರಾದ ಡಾ.ನಾಗಶ್ರೀ ಎಸ್.ಶಂಕರ್ ರವರು ಮಾತನಾಡಿ, ನಾನು ಪುತ್ತೂರಿಗೆ ಆಗಮಿಸಿ ಒಂದೂವರೆ ವರ್ಷವಾಗಿದ್ದು ಇಲ್ಲಿನ ಜನ ತುಂಬಾ ಇಷ್ಟ ಜೊತೆಗೆ ಇಲ್ಲಿನ ಜನರೊಂದಿಗೆ ಕರ್ತವ್ಯ ನಿರ್ವಹಿಸಲು ಖುಶಿಯಾಗುತ್ತಿದ್ದು ನಮ್ಮನ್ನು ಗುರುತಿಸಿದ್ದಕ್ಕೆ ಗೌರವ ಭಾವದ ಕೃತಜ್ಞತೆಗಳು ಎಂದರು.
ಮಕ್ಕಳ ಕುರಿತಾದ ಪರಿಶುದ್ಧ ಸಿನೆಮಾಗಳಾಗಿವೆ-ರಝಾಕ್ ಪುತ್ತೂರು:
ಪೆನ್ಸಿಲ್ ಬಾಕ್ಸ್, ಕನಸು, ಗಂಧದ ಗುಡಿ, ಸ್ಕೂಲ್ ಲೀಡರ್ ಚಿತ್ರಗಳ ನಿರ್ದೇಶಕ ರಝಾಕ್ ಪುತ್ತೂರುರವರು ಮಾತನಾಡಿ, ಸಿನೆಮಾಗಳೆಂದರೆ ಹಿಂಸೆ, ದ್ವಂದ್ವ ಸಂಭಾಷಣೆ, ಮರ ಸುತ್ತಾಟ ಮುಂತಾದೆಡೆ ಸಾಗುತ್ತಿರುವ ಕಾಲಘಟ್ಟವಾಗಿದೆ. ಆದರೆ ನನ್ನ ಎಲ್ಲಾ ಸಿನೆಮಾಗಳು ಮಕ್ಕಳ ಕುರಿತಾದ ಸಿನೆಮಾಗಳಾಗಿದ್ದು, ಹೊಟ್ಟೆಯಲ್ಲಿನ ಮಗು ಕೂಡ ನೋಡುವ ಪರಿಶುದ್ಧ ಸಿನೆಮಾಗಳಾಗಿವೆ ಎಂದರು.
ಚಪ್ಪಲ್ ಅಂಗಡಿಡ್ ಮಾತೆರ್ಲನ ಚಪ್ಪಾಲೆದ ಸನ್ಮಾನ ತಿಕ್ಕ್ಂಡ್-ಸುಂದರ ರೈ ಮಂದಾರ:
ರಂಗಭೂಮಿ ಹಾಗೂ ಸಿನೆಮಾ ನಟ, ಅಭಿನಯ ಚಕ್ರವರ್ತಿ ಸುಂದರ ರೈ ಮಂದಾರರವರು, ಶಿಕ್ಷಕ ಸುರೇಶ್ ಶೆಟ್ಟಿಯವರ ಸಹೋದರಿ ಶಿಕ್ಷಕಿಯಾಗಿದ್ದ ಶಾಂತಾ ಶೆಟ್ಟಿಯವರು ನನಗೆ ಬಾಲ್ಯದಲ್ಲಿ ನೀನು ಶಾಲೆಗೆ ಬರುವ ಬದಲು ನಾಟಕ, ಸಿನೆಮಾ ಇದೇ ಮಾಡು ಎಂದಿದ್ದರು. ಅವರ ಅಂದಿನ ಶಾಪ ಇಂದು ನನಗೆ ವರವಾಗಿ ಪರಣಮಿಸಿದೆ. ಓರ್ವ ಕಲಾವಿದನಾಗಿ ದೇಶವಿದೇಶಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಐದು ದಿನದ ಹಿಂದೆ ಇದೇ ಚಪ್ಪಲ್ ಅಂಗಡಿಯಲ್ಲಿ ಚಪ್ಪಲ್ ಖರೀದಿಸಲು ಬಂದಿದ್ದಾಗ ರಫೀಕ್ ಸರ್ ರವರು ನಾಡಿದ್ದು ನಿಮಗೆ ಸನ್ಮಾನ ಮಾಡುತ್ತೇವೆ ಬನ್ನಿ ಎಂದಿದ್ದರು. ಅದರಂತೆ ಚಪ್ಪಲ್ ಅಂಗಡಿಡ್ ಮಾತೆರ್ಲನ ಚಪ್ಪಾಲೆದ ಸನ್ಮಾನ ತಿಕ್ಕ್ಂಡ್ ಎಂದರು.
ಅಭಿನಂದನೆ:
ರೋಟರಿ ಪುತ್ತೂರು ಇದರ ನಿಕಟಪೂರ್ವ ರಫೀಕ್ ಎಂ.ಜಿರವರ ರೋಟರಿ ಲೆಕ್ಕಪತ್ರಗಳನ್ನು ಕಂಪ್ಯೂಟರ್ ನಲ್ಲಿ ದಾಖಲಿಸಿಕೊಂಡು ಸೂಕ್ತ ಸಮಯದಲ್ಲಿ ಸಿಗಲು ಕಾರಣಕರ್ತರಾದ ಮಳಿಗೆಯ ಮ್ಯಾನೇಜರ್ ಪ್ರಶಾಂತ್ ರವರನ್ನು ಮಳಿಗೆಯ ವತಿಯಿಂದ ಶಾಲು ಹೊದಿಸಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿ ಸಚಿನ್ ಟ್ರೇಡರ್ಸ್ ಮಾಲಕ ಇಂದಾಜೆ ಮಂಜುನಾಥ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಪುತ್ತೂರು ಕಾರ್ಯದರ್ಶಿ ಪ್ರೊ.ಸುಬ್ಬಪ್ಪ ಕೈಕಂಬ, ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ನಿಕಟಪೂರ್ವ ಕಾರ್ಯದರ್ಶಿ ದಾಮೋದರ್ ಕೆ.ಎ, ಸದಸ್ಯರಾದ ಪರಮೇಶ್ವರ ಗೌಡ, ಸೋಮಶೇಖರ್ ರೈ, ಸುಂದರ ಗೌಡ, ವಾಮನ ಪೈ, ಮನೋಜ್ ಟಿ.ವಿ, ಎಂ.ಜಿ ರೈ, ಗೋವಿಂದ ಪ್ರಕಾಶ್ ಸಾಯ, ಡಾ.ಜೈದೀಪ್, ಸುದರ್ಶನ್ ರಾವ್, ಗೋಪ ಕುಮಾರ್, ಬಾಲಕೃಷ್ಣ ಆಚಾರ್ಯ, ಡಾ.ಅಶೋಕ್ ಪಡಿವಾಳ್, ಸತೀಶ್ ನಾಯಕ್, ಜೈರಾಜ್ ಭಂಡಾರಿ, ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್, ಪ್ರೊ.ಝೇವಿಯರ್ ಡಿ’ಸೋಜ, ಹೆರಾಲ್ಡ್ ಮಾಡ್ತಾ, ಲೋವಲ್ ಮೇವಡ, ಪ್ರೇಮಾನಂದ ಬಿ, ಗುರುರಾಜ್ ಕೊಳತ್ತಾಯ, ಶ್ರೀಧರ್ ಗೌಡ ಕಣಜಾಲು, ರೋಟರಿ ಎಲೈಟ್ ಸದಸ್ಯ ಆಸ್ಕರ್ ಆನಂದ್, ರೋಟರ್ಯಾಕ್ಟ್ ಪುತ್ತೂರು ಅಧ್ಯಕ್ಷ ವಿನೀತ್, ನಿಕಟಪೂರ್ವ ಅಧ್ಯಕ್ಷ ಸುಬ್ರಮಣಿ, ಮದರ್ ಇಂಡಿಯಾ ಪಾದರಕ್ಷೆಗಳ ಮಳಿಗೆ ಮಾಲಕ ಎಂ.ಜಿ ರಝಾಕ್ ರವರು ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್ ಸ್ವಾಗತಿಸಿ, ಸನ್ಮಾನಿತರನ್ನು ಪರಿಚಯಿಸಿ ವಂದಿಸಿದರು. ಹಿರಿಯ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಸಹಕರಿಸಿದರು.
ಐವರಿಗೆ ಸನ್ಮಾನ..
ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ.ಅಜಯ್, ಬೊಳ್ವಾರು ಮಹಾವೀರ ಆಸ್ಪತ್ರೆ ಹಾಗೂ ಪುತ್ತೂರು ಪಾಲಿ ಕ್ಲಿನಿಕ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ನಾಗಶ್ರೀ ಎಸ್.ಶಂಕರ್, ಪುತ್ತೂರು ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ ಶಿವಾನಂದರ ಪರವಾಗಿ ಅವರ ಪುತ್ರ ಸೃಜನ್ ಊರುಬೈಲು, ಸ್ಕೂಲ್ ಲೀಡರ್, ಪೆನ್ಸಿಲ್ ಬಾಕ್ಸ್ ಚಿತ್ರಗಳ ನಿರ್ದೇಶಕ ರಝಾಕ್ ಪುತ್ತೂರು, ರಂಗಭೂಮಿ ಹಾಗೂ ಸಿನೆಮಾ ನಟ ಸುಂದರ್ ರೈ ಮಂದಾರರವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ರೋಟರಿ ವೈದ್ಯರುಗಳಿಗೆ ಸನ್ಮಾನ..
ಜು.1 ವೈದ್ಯರ ದಿನಾಚರಣೆಯ ಪ್ರಯುಕ್ತ ರೋಟರಿ ಪುತ್ತೂರು ಸದಸ್ಯ ವೈದ್ಯರಾದ ಪುತ್ತೂರು ಸರಕಾರಿ ಆಸ್ಪತ್ರೆಯ ದಂತ ವೈದ್ಯ ಡಾ.ಜೈದೀಪ್, ಹೋಮಿಯೋಪತಿ ವೈದ್ಯ ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ರವರನ್ನು ರೋಟರಿ ಪುತ್ತೂರು ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಪುತ್ತೂರುನಲ್ಲಿ ಸುಮಾರು 25ಕ್ಕೂ ಮಿಕ್ಕಿ ವೈದ್ಯರುಗಳಿದ್ದು ನೂತನ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರ ನೇತೃತ್ವದಲ್ಲಿ ಅವರವರ ಮನೆಗೆ, ಚಿಕಿತ್ಸಾಲಯಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.