ನೆಲ್ಯಾಡಿ: ಇಲ್ಲಿನ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ, ಕಾಲೇಜು ಸಂಸತ್ತಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಜೂ.30ರಂದು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾಲೇಜು ಸಂಸತ್ತಿನ ಉದ್ಘಾಟಿಸಿದ ಮುಂಡಾಜೆ ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಜೋಲಿ ಒ.ಎ.ರವರು, ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳು. ಹಾಗಾಗಿ ಭವಿಷ್ಯದ ಬಗೆಗಿನ ಚಿಂತನೆಗೆ ಮಾರ್ಗದರ್ಶನ ನೀಡುವ, ನಾಯಕತ್ವದ ಗುಣವನ್ನು ರೂಢಿಸಿಕೊಳ್ಳುವ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಲು ಪ್ರೇರಣೆ ನೀಡಲು ವಿದ್ಯಾರ್ಥಿ ಸಂಸತ್ತು ಸಹಕಾರಿ ಎಂದರು. ವಿದ್ಯಾರ್ಥಿ ಸಂಸತ್ತಿನ ನಾಯಕರಿಗೆ ಪದ ಪ್ರದಾನ ಮಾಡಿದ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಶಕ್ತವಾಗಿ ಎದುರಿಸಿ ಸಫಲತೆ ಸಾಧಿಸಿದಾಗ ಸುಂದರ ಭವಿಷ್ಯ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಆ ಹಾದಿಯಲ್ಲಿ ಮುನ್ನಡೆಯುವಂತಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ. ನೋಮಿಸ್ ಕುರಿಯಾಕೋಸ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಯಕತ್ವವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಪಟ್ಟರೆ, ಭಗವಂತನ ಅನುಗ್ರಹದಿಂದ ಭವಿಷ್ಯದಲ್ಲಿ ಪ್ರಕಾಶಿಸಬಹುದು ಎಂದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
2025-26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಹಾಗೂ ವಿಷಯವಾರು ಅಂಕಗಳಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಹೆಸರನ್ನು ಶಿಕ್ಷಕಿ ಅನುಷಾ ಎಂ.ಕೆ. ಹಾಗೂ ಉಪನ್ಯಾಸಕ ಪ್ರಜ್ವಲ್ ಕುಮಾರ್ ಕೆ.ಪಿ. ವಾಚಿಸಿದರು.
ಪೂರ್ವವಿದ್ಯಾರ್ಥಿನಿಗೆ ಸನ್ಮಾನ:
ವಿದ್ಯಾಸಂಸ್ಥೆಯ ಪೂರ್ವ ವಿದ್ಯಾರ್ಥಿನಿ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ.ಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಜಿಲ್ ಶಾ ಮೇರಿ ಪಿ.ಜೆ. ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಏಲಿಯಾಸ್ ಎಂ.ಕೆ.ರವರು ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷೆ ಆಯಿಶತ್ ಫಾಹಿಮಾ ಪದಸ್ವೀಕಾರ ಭಾಷಣ ಹಾಗೂ ಶಾಲಾ ವರದಿ ವಾಚಿಸಿದರು. ಕನ್ನಡ ಮಾಧ್ಯಮ ವಿಭಾಗದ ಮುಖ್ಯಗುರು ಎಂ.ಐ.ತೋಮಸ್ ಸ್ವಾಗತಿಸಿ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಕೆ. ವಂದಿಸಿದರು. ಕನ್ನಡ ಉಪನ್ಯಾಸಕ ಚೇತನ್ ಕುಮಾರ್ ಟಿ. ಕಾರ್ಯಕ್ರಮ ನಿರೂಪಿಸಿದರು. ಗೀತಾ ಪಿ.ಬಿ., ಭವ್ಯಾ, ರಾಬಿಯಾ ಕಾರ್ಯಕ್ರಮ ಸಂಯೋಜಿಸಿದರು. ಪೂರ್ವ ವಿದ್ಯಾರ್ಥಿ ಪ್ರಿನ್ಸ್ ಚಾಕೋ, ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.
ಕೃತಜ್ಞತಾ ಬಲಿಪೂಜೆ:
ಬೆಳಿಗ್ಗೆ ಇಚ್ಲಂಪಾಡಿ ಉರೆಜಾಲ್ ಇಎಇ ಸೈಂಟ್ ಸೈಮನ್ಸ್ ಚರ್ಚ್‌ನ ವಿಕಾರ್ ರೆ.ಫಾ.ವಿಲ್ಸನ್ ಮತ್ತಾಯಿ ಅವರು ವಿದ್ಯಾಸಂಸ್ಥೆಯ ದಿವ್ಯಚೇತನ ಚಾಪೆಲ್‌ನಲ್ಲಿ ಕೃತಜ್ಞತಾ ಬಲಿಪೂಜೆ ನೆರವೇರಿಸಿದರು. ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಕೀರ್ತಿಶೇಷ ಪರಮಪೂಜ್ಯ ಬಿಷಪ್‌ರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಭಾವಚಿತ್ರಕ್ಕೆ ಪುಷ್ಪಾಂಜಲಿ ಮಾಡಲಾಯಿತು. ವಿದ್ಯಾರ್ಥಿಗಳ ಸರ್ವಧರ್ಮ ಪ್ರಾರ್ಥನೆಯ ಬಳಿಕ ಸಭಾ ಕಾರ್ಯಕ್ರಮ ಆರಂಭಗೊಂಡಿತು.