ವಿದ್ಯಾರ್ಥಿಗಳ ಮನಗೆದ್ದ ಆಧುನಿಕ ವ್ಯವಸ್ಥೆಯೊಂದಿಗಿನ ಅತ್ಯುತ್ಕೃಷ್ಟ ಶಿಕ್ಷಣ
ಪುತ್ತೂರು: ಶಿಕ್ಷಣದಲ್ಲಿ ಆಧುನಿಕತೆ ಇಂದಿನ ಅಗತ್ಯ. ಈ ಅನಿವಾರ್ಯತೆಯನ್ನು ಮನಗಂಡ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ತಾನು ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಕಾಯಕಕ್ಕೆ ಪೂರಕವಾಗುವ ಹತ್ತು ಹಲವು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಅಂತಹದ್ದರಲ್ಲಿ ಒಂದಾದ ಸ್ಮಾರ್ಟ್ ಬೋರ್ಡ್ ಇದೀಗ ವಿದ್ಯಾರ್ಥಿಗಳ ಕಲಿಕೆಗೆ ನೆಚ್ಚಿನ ಪೂರಕ ಸಂಗತಿಯಾಗಿ ಪರಿಣಮಿಸಿದೆ.
ಈ ಸ್ಮಾರ್ಟ್ ಬೋರ್ಡ್ ತರಗತಿಗೆ ಬಂದ ನಂತರ ವಿದ್ಯಾರ್ಥಿಗಳ ಕಲಿಕಾ ಸಾಧ್ಯತೆ ಮತ್ತಷ್ಟು ವಿಸ್ತರಿಸಿಕೊಂಡಿದೆ. ಈ ಬೋರ್ಡ್‌ನಲ್ಲಿ ಪ್ರತಿಯೊಂದನ್ನೂ ಸಚಿತ್ರವಾಗಿ, ವೀಡಿಯೋ ಸಮೇತವಾಗಿ ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಭೂಗೋಳಶಾಸ್ತ್ರ ತರಗತಿಯಲ್ಲಿ ಇಡಿಯ ಭೂಮಿಯನ್ನು 3 ಡಿ ವ್ಯವಸ್ಥೆಯಲ್ಲಿ ಬೇಕಾದಂತೆ ತಿರುಗಿಸುತ್ತಾ ನಿರ್ದಿಷ್ಟ ಜಾಗವನ್ನು ಗುರುತಿಸುತ್ತಾ ಸುಲಭಕ್ಕೆ ಮಕ್ಕಳಿಗೆ ವಿಷಯ ಮನದಟ್ಟು ಮಾಡಿಕೊಡಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಯೋಗಿಕ ತರಗತಿಗಳಲ್ಲಿ ತೋರಿಸಲು ಅಸಾಧ್ಯವಾದ ಕೆಲವು ವಿಷಯಗಳನ್ನೂ ಈ ಬೋರ್ಡ್ ಮುಖಾಂತರ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬಹುದು. ಮನುಷ್ಯ ಅಥವ ಪ್ರಾಣಿಗಳ ದೇಹದ ಭಾಗಗಳನ್ನು ಸುಲಭಕ್ಕೆ ಕಾಣಿಸಬಹುದು. ನಿರ್ವಾತದಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಇಲ್ಲಿ ತೋರಿಸಬಹುದು. ಜತೆಗೆ ಪ್ರಾಯೋಗಿಕ ತರಗತಿಗಳಲ್ಲಿ ಸಾಧಿಸಿ ತೋರಿಸಿದ ಸಂಗತಿಗಳನ್ನು ಮತ್ತೊಮ್ಮೆ ಸಚಿತ್ರವಾಗಿ ಕಾಣಿಸಿ ಹೆಚ್ಚಿನ ಮಾಹಿತಿ ನೀಡಬಹುದು. ಸಣ್ಣ ತರಗತಿಗಳಲ್ಲಿ ಇಡಿಯ ಪಠ್ಯ ಪುಸ್ತಕವನ್ನೇ ಸ್ಮಾರ್ಟ್ ಬೋರ್ಡಿನಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮುಂದುವರೆಸಬಹುದು. ಹೀಗೆ ಸ್ಮಾರ್ಟ್ ಬೋರ್ಡ್‌ನ ಉಪಯುಕ್ತತೆ ಸಾಗುತ್ತಲೇ ಇರುತ್ತದೆ.

ಈ ಬೋರ್ಡ್ ಕೇವಲ ಸಚಿತ್ರ ಅಥವ ವೀಡಿಯೋ ಪ್ರದರ್ಶನಕ್ಕಷ್ಟೆ ಸೀಮಿತವಲ್ಲ. ಬದಲಾಗಿ ಶಿಕ್ಷಕರು ಬೋರ್ಡ್‌ನಲ್ಲಿ ಬರೆಯುವಂತೆ ಈ ಸ್ಮಾರ್ಟ್ ಬೋರ್ಡಿನಲ್ಲೂ ಬರೆಯಬಹುದು. ತದನಂತರ ಅಳಿಸಲೂಬಹುದು! ಹೀಗೆ ಬರೆಯುವುದಕ್ಕೆಂದೇ ವಿಶೇಷ ಪೆನ್ ಈ ಸ್ಮಾರ್ಟ್ ಬೋರ್ಡ್ ಜತೆಗೆ ಲಭ್ಯ ಇದೆ. ಅಂದಹಾಗೆ ಮಾಮೂಲಿ ಬೋರ್ಡ್ ಒಂದೇ ತೆರನಾಗಿ ಪ್ರತಿದಿನವೂ ವಿದ್ಯಾರ್ಥಿಗಳಿಗೆ ಕಾಣಿಸಿದರೆ ಈ ಸ್ಮಾರ್ಟ್ ಬೋರ್ಡ್‌ನ ಬಣ್ಣವನ್ನು ದಿನಕ್ಕೊಂದರಂತೆ, ತರಗತಿಗೊಂದರಂತೆ ಅಥವ ಬೇಕಾದಲ್ಲಿ ಕ್ಷಣ ಕ್ಷಣಕ್ಕೂ ಬದಲಾಯಿಸುತ್ತಲೇ ಇರಬಹುದು! ಹೀಗಾಗಿ ಅಂಬಿಕಾದ ವಿದ್ಯಾರ್ಥಿಗಳಿಗೆ ಕರಿಹಲಗೆಯ ಬದಲಾಗಿ ವರ್ಣರಂಜಿತ ಹಲಗೆಯ ವ್ಯವಸ್ಥೆ ಈ ಬೋರ್ಡ್ ಮುಖಾಂತರ ಸಾಧ್ಯವಾಗಿದೆ.
ಸ್ಮಾರ್ಟ್ ಬೋರ್ಡ್ ಮೂಲಕ ಪಾಠ ಪ್ರವಚನ ನಡೆಯುವುದರಿಂದ ನಮಗೆ ಬೋರ್ ಅನಿಸುವುದಿಲ್ಲ. ಪ್ರತಿಯೊಂದು ವಿಷಯವೂ ಚಿತ್ರ, ವಿಡೀಯೋ ಮುಖಾಂತರ ಸುಲಭಕ್ಕೆ ಅರ್ಥವಾಗುತ್ತದೆ. ಕೇವಲ ಪಾಠ ಮಾಡಿದರೆ ಕೆಲವೊಮ್ಮೆ ಅನುಮಾನಗಳು ಉಳಿಯುತ್ತವೆ. ಆದರೆ ಈ ಸ್ಮಾರ್ಟ್ ಬೋರ್ಡ್ ಮೂಲಕ ಸಚಿತ್ರ ಪಾಠ ಕೇಳಿಸಿಕೊಂಡಾಗ ನಮಲ್ಲಿ ಅನುಮಾನಗಳೇ ಉಳಿಯುವುದಿಲ್ಲ ಎಂಬುದು ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಜಶ್ಮಿ ಅವರ ಅಭಿಪ್ರಾಯ.
ಈ ಸ್ಮಾರ್ಟ್ ಬೋರ್ಡ್‌ಗೆ ಇಂಟರ್‌ನೆಟ್ ವ್ಯವಸ್ಥೆಯೂ ಜೋಡಣೆಯಾಗಿದೆ. ಹಾಗಾಗಿ ಪಾಠದ ಜತೆ ಜತೆಗೆ ಪೂರಕ ಸಂಗತಿಗಳನ್ನು. ಪಾಠ ಪ್ರವಚನಕ್ಕೆ ಹೆಚ್ಚಿನ ಮೌಲ್ಯ ನೀಡುವ ಪ್ರಚಲಿತ ಸಂಗತಿಗಳನ್ನು ಕಾಣಿಸುವುದಕ್ಕೂ ಸಾಧ್ಯವಾಗುತ್ತಿದೆ. ದೇಶದಲ್ಲಿ ವೈಜ್ಞಾನಿಕ ಸಾಧನೆಗಳಾಗುವಾಗ, ವಿದ್ಯಾರ್ಥಿಗಳಿಗೆ ಗೊತ್ತಿರಬೇಕಾದ ಹತ್ತಾರು ವಿಚಾರಗಳು ಘಟಿಸುವಾಗ ನೇರ ಪ್ರಸಾರದಲ್ಲಿಯೂ ಅವುಗಳನ್ನು ಕಾಣಿಸುವುದಕ್ಕೆ ಈ ಸ್ಮಾರ್ಟ್ ಬೋರ್ಡ್ ನೆರವಾಗುತ್ತಿದೆ. ಈ ಬೋರ್ಡಿನ ಪರದೆ 4 ಕೆ ರೆಸಲ್ಯೂಶನ್ ಹೊಂದಿರುವುದರಿಂದ ಹೆಚ್ಚು ಸ್ಪಷ್ಟವಾಗಿರುವುದಲ್ಲದೆ ೧೮೦ ಡಿಗ್ರಿ ಕೋನದಿಂದಲೂ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿರುವ ಈ ಅತ್ಯುತ್ತಮ ಸ್ಮಾರ್ಟ್ ಬೋರ್ಡ್ ಒಂದಕ್ಕೆ ಸರಿ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳಷ್ಟು ವೆಚ್ಚ ತಗಲಿದೆ. ಪ್ರತಿ ತರಗತಿಯಲ್ಲೂ ಒಂದೊಂದು ಇಂತಹ ಸ್ಮಾರ್ಟ್ ಬೋರ್ಡ್‌ಗಳಿವೆ. ಖರ್ಚು ವೆಚ್ಚದ ಮುಖ ನೋಡದೆ ಕೇವಲ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಳವಡಿಸಲಾದ ಈ ಸ್ಮಾರ್ಟ್ ಬೋರ್ಡ್‌ಗಳು ವಿದ್ಯಾರ್ಥಿಗಳ ಮನಗೆದ್ದಿವೆ. ಹೆಚ್ಚಿನ ಅಂಕ ಗಳಿಸುವಲ್ಲಿ ಸಹಕಾರಿಯಾಗಿವೆ.
ಅಂಬಿಕಾ ಶಿಕ್ಷಣ ಸಂಸ್ಥೆಗಳು ಹೀಗೆ ಹೊಸತನಕ್ಕೆ ಅಡಿಯಿರಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ತರಗತಿಗಳಿಗೆ ಎ.ಸಿ. ಅಳವಡಿಸುವ ಮುಖೇನ ಹವಾನಿಯಂತ್ರಿತ ತರಗತಿಗಳುಳ್ಳ ಪುತ್ತೂರಿನ ಮೊದಲ ಶಿಕ್ಷಣ ಸಂಸ್ಥೆ ಎಂಬ ಅಗ್ಗಳಿಕೆಗೆ ಪಾತ್ರವಾಗಿತ್ತು. ತನ್ನ ಆವರಣದಲ್ಲಿ ಸುಸಜ್ಜಿತ ಈಜು ಕೊಳವೊಂದನ್ನು ರೂಪಿಸಿ ಈಜು ಕೊಳ ಹೊಂದಿದ ತಾಲೂಕಿನ ಪ್ರಥಮ ಸಂಸ್ಥೆ ಎಂದು ಗುರುತಿಸಿಕೊಂಡಿತ್ತು. ಅಂತಹ ಸಾಲಿಗೆ ಇದೀಗ ಸ್ಮಾರ್ಟ್ ಬೋರ್ಡ್‌ಗಳೂ ಸೇರಿವೆ.
ಶಿಕ್ಷಣದಲ್ಲಿ ಸಂಸ್ಕಾರ, ದೇಶಭಕ್ತಿ, ಧರ್ಮ ಜಾಗೃತಿಯನ್ನು ಮೂಡಿಸುವುದರ ಜತೆಗೆ ಆಧುನಿಕ ವ್ಯವಸ್ಥೆಗಳನ್ನೂ ಕಾಲಕಾಲಕ್ಕೆ ಕಲ್ಪಿಸಿಕೊಡುವುದಕ್ಕೆ ಅಂಬಿಕಾ ಸಂಸ್ಥೆ ಬದ್ಧವಾಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ಹೆತ್ತವರು ತಮ್ಮ ಮಕ್ಕಳನ್ನು ನಮ್ಮ ಕೈಗೆ ಒಪ್ಪಿಸುತ್ತಾರೆ. ಹೀಗಿರುವಾಗ ಆ ಮಕ್ಕಳಿಗೆ ಸಹಾಯಕವಾಗುವ ಯಾವುದೇ ಸಂಗತಿಯನ್ನಾದರೂ ನೆರವೇರಿಸಬೇಕಾದದ್ದು ನಮ್ಮ ಕರ್ತವ್ಯ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರ ಮಾತು.