ನೆಲ್ಯಾಡಿ: ವಾರದ ಹಿಂದೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ನಡೆದ ಲಾರಿ ಅಪಘಾತದಲ್ಲಿ ಲಾರಿ ಚಾಲಕನ ಹೆಸರು ಮರೆಮಾಚಿ ತಾನೇ ಲಾರಿ ಚಾಲಕನೆಂದು ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಹರೀಶ ಆರ್. ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸಾಗಿಸುತ್ತಿದ್ದ ಲಾರಿ(ಕೆಎ 52, 7482) ಜೂ.24ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಘಟನೆಯಲ್ಲಿ ಲಾರಿ ಸಂಪೂರ್ಣ ಜಖಂಗೊಂಡಿತ್ತು. ಜೂ.25ರಂದು ಬೆಳಿಗ್ಗೆ ಲಾರಿ ಮಾಲಕ, ಬೆಂಗಳೂರು ನಿವಾಸಿ ಹರೀಶ ಆರ್. ನೆಲ್ಯಾಡಿ ಹೊರ ಠಾಣೆಗೆ ಬಂದು, ಅಪಘಾತದ ವಿಚಾರ ತಿಳಿಸಿ ಲಾರಿಯಲ್ಲಿ ಚಾಲಕನಾಗಿ ಪ್ರೇಮ್ ಕುಮಾರ್ ಎಂಬವರಿದ್ದರೂ, ಇದನ್ನು ಮರೆಮಾಚಿ ಲಾರಿಯ ವಿಮಾ ಪರಿಹಾರ ಪಡೆದು ದುರಸ್ತಿ ಮಾಡಿಸುವ ಸಲುವಾಗಿ ತಾನೇ ಚಾಲಕನೆಂದು ಲಿಖಿತವಾಗಿ ಸುಳ್ಳು ಮಾಹಿತಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಹರೀಶ ಆರ್. ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಪ್ರಕರಣದಲ್ಲಿ ಲಾರಿ ಚಾಲಕ ಪ್ರೇಮ್‌ಕುಮಾರ್ ಅವರ ಶವ ಎರಡು ದಿನದ ಬಳಿಕ ಅಪಘಾತ ನಡೆದ ಸ್ಥಳದಿಂದ ಸುಮಾರು 200 ಮೀ.ದೂರದ ಹಳ್ಳದಲ್ಲಿ ಪತ್ತೆಯಾಗಿತ್ತು.