ನೆಲ್ಯಾಡಿ: ಇಲ್ಲಿನ ಶಾಂತಿಬೆಟ್ಟು ನಿವಾಸಿ ಹಮೀದ್ ಎಂಬವರ ಪುತ್ರ ಮೊಹಮ್ಮದ್ ನಿಶಾನ್(28ವ.)ಎಂಬವರು ಮಂಗಳೂರಿನಿಂದ ಬೆಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಡಸ್ಟರ್ ಕಾರಿನಲ್ಲಿ ಬಂದ ಮೂರ‍್ನಾಲ್ಕು ಮಂದಿ ಸಕಲೇಶಪುರ ಠಾಣಾ ವ್ಯಾಪ್ತಿಯ ಬಾಳುಪೇಟೆ ಬೈಪಾಸ್‌ನಲ್ಲಿ ಅಡ್ಡಹಾಕಿ ಲಾರಿಯ ಗಾಜನ್ನು ಹೊಡೆದು ಜಖಂಗೊಳಿಸಿರುವುದಲ್ಲದೇ ಮೊಹಮ್ಮದ್ ನಿಶಾನ್‌ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಜು.1ರಂದು ಮಧ್ಯರಾತ್ರಿ ನಡೆದಿದೆ. ಗಾಯಗೊಂಡಿರುವ ಮೊಹಮ್ಮದ್ ನಿಶಾನ್ ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮೊಹಮ್ಮದ್ ನಿಶಾನ್ ಅವರು ಜೀವನೋಪಯಕ್ಕಾಗಿ ಕ್ಯಾಂಟರ್ ಲಾರಿ(ಕೆಎ 19 ಎಸಿ 9330)ಹೊಂದಿದ್ದು ಜು.1ರಂದು ಸಂಜೆ 6 ಗಂಟೆಗೆ ಕ್ಯಾಂಟರ್‌ಗೆ ಮಂಗಳೂರಿನ ತುಂಬೆಯಿಂದ ಪ್ಲೈವುಡ್ ಲೋಡ್ ಮಾಡಿಕೊಂಡು ಬೆಂಗಳೂರಿಗೆ ಹೊರಟು ಮಧ್ಯರಾತ್ರಿ 12 ಗಂಟೆಗೆ ಬಾಳುಪೇಟೆ ಬೈಪಾಸ್ ಬಿ.ಎಂ.ರಸ್ತೆಯಲ್ಲಿ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕೆಂಪು ಬಣ್ಣದ ಡಸ್ಟರ್ ಕಾರು(ಕೆಎ 53, ಎಂಎಫ್ 1744)ನಲ್ಲಿ ಬಂದು ಮೂರ‍್ನಾಲ್ಕು ಜನ ಯುವಕರು ಲಾರಿಯನ್ನು ಅಡ್ಡಹಾಕಿದ್ದು ಕಾರಿನಲ್ಲಿದ್ದ ಇಬ್ಬರು ಯುವಕರು ರಾಡ್ ಹಾಗೂ ತಲ್ವಾರ್ ಹಿಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಕಾರಿಗೆ ತಗುಲುವ ರೀತಿ ಬರುತ್ತೀಯಾ ಎಂದು ಕೂಗಾಡಿ, ಒಬ್ಬಾತ ಕೈಯಲ್ಲಿದ್ದ ತಲ್ವಾರ್‌ನಿಂದ ಲಾರಿಯ ಮುಂಭಾಗದ ಗಾಜು ಹಾಗೂ ಬಲಭಾಗದ ಮಿರರ್‌ಗೆ ಹೊಡೆದು ಜಖಂಗೊಳಿಸಿದ್ದಾನೆ.

ಈ ಬಗ್ಗೆ ಮೊಹಮ್ಮದ್‌ರವರು ಪ್ರಶ್ನಿಸಿದಾಗ ನಮಗೆ ತಿರುಗಿ ಮಾತನಾಡುತ್ತೀಯ ಎಂದು ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಲಾರಿಯಿಂದ ಹೊರಗಡೆ ಎಳೆದು ರಾಡಿನಿಂದ ಹಲ್ಲೆ ಮಾಡಿದ್ದಾರೆ. ಇದೇ ಸಮಯಕ್ಕೆ ಸದ್ರಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿರುವುದನ್ನು ನೋಡಿ ಕೊಲೆ ಬೆದರಿಕೆಯೊಡ್ಡಿ ತೆರಳಿದ್ದಾರೆ. ನಂತರ ಮೊಹಮ್ಮದ್ ನಿಶಾನ್‌ರವರು ಲಾರಿ ಚಲಾಯಿಸಿಕೊಂಡು ಮುಂದಕ್ಕೆ ಹೋದಾಗಲೂ ಲಾರಿಯ ಬಲ ಮತ್ತು ಎಡ ಭಾಗದಲ್ಲಿ ಅಡ್ಡಡ್ಡ ಬಂದು ಕಿಟಕಿಯಿಂದ ಹೊರಗೆ ಕೈ ಹಾಕಿ ದೊಣ್ಣೆ ತೋರಿಸಿ ಮುಂದೆ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಮೊಹಮ್ಮದ್ ನಿಶಾನ್‌ರವರು ನಿಡನೂರು ನಯರಾ ಪೆಟ್ರೋಲ್ ಬಂಕ್ ಬಳಿ ಹೋಗಿ 112ಗೆ ಸಹಾಯಕ್ಕಾಗಿ ಕರೆ ಮಾಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಬಳಿಕ ಮೊಹಮ್ಮದ್ ನಿಶಾನ್ ಅವರು ಸ್ಥಳೀಯರ ಸಹಾಯದಿಂದ ಸಕಲೇಶಪುರ ಸರಕಾರಿ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮೊಹಮ್ಮದ್ ನಿಶಾನ್ ಅವರ ಶರ್ಟ್ ಹಿಡಿದು ಎಳೆದಾಡಿದಾಗ ಶರ್ಟ್ ಹರಿದು ಹೋಗಿದ್ದು ಅವರ ಜೇಬಿನಲ್ಲಿದ್ದ 18,500 ರೂ. ಇರಲಿಲ್ಲ ಎಂದು ಹೇಳಲಾಗಿದೆ. ಘಟನೆ ಬಗ್ಗೆ ಮೊಹಮ್ಮದ್ ನಿಶಾನ್ ನೀಡಿದ ದೂರಿನಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.