ಪುತ್ತೂರು: ಪುತ್ತೂರಿನ ಮಕ್ಕಳ ತಜ್ಞೆಯೂ, ಮಕ್ಕಳ ಮತ್ತು ಪೋಷಕರ ಆಪ್ತಸಲಹೆಗಾರರೂ ಆದ ಡಾ.ಸುಲೇಖಾ ವರದರಾಜ್ ಅವರನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ವತಿಯಿಂದ ವೈದ್ಯರ ದಿನಾಚರಣೆಯ ಪ್ರಯುಕ್ತ ಜು.1ರಂದು ಗೌರವಿಸಿ ಸನ್ಮಾನಿಸಲಾಯಿತು.

ಡಾ. ಸುಲೇಖಾ ಅವರು ಸರ್ಕಾರಿ ಸೇವೆಯಲ್ಲಿಯೂ ಹದಿಹರೆಯದ ಮಕ್ಕಳ ಮನೋದೈಹಿಕ ಆರೋಗ್ಯದ ಕ್ಷೇತ್ರದಲ್ಲಿಯೂ ಗೈದ ಸೇವೆಗಳನ್ನು ಗುರುತಿಸಿ ಅಭಿನಂದಿಸಲಾಯಿತು. ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಹಿರಿಯ ಪ್ರಾಧ್ಯಾಪಕರಾದ ಡಾ. ಸುಜಾತಾ, ಡಾ. ಗೀತಾ, ಡಾ. ಶಿವಪ್ರಸಾದ್ ಉಪಸ್ಥಿತರಿದ್ದರು. ಡಾ. ಸುಲೇಖಾ ಅವರು ಆಧುನಿಕ ಜೀವನ ಶೈಲಿಯು ನಮ್ಮ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆಯೂ ಸರಳ ಬದುಕು, ಯೋಗ, ಪ್ರಕೃತಿ ಚಿಕಿತ್ಸೆಗಳಂತಹ ವಿಧಾನಗಳ ಪ್ರಸ್ತುತತೆಯ ಬಗೆಗೂ ವಿಶೇಷ ಉಪನ್ಯಾಸ ನೀಡಿದರು. ಸುಮಾರು 400ಕ್ಕೂ ಮಿಕ್ಕಿ ವೈದ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಸುಲೇಖಾ ರವರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರ ಪತ್ನಿ.