ಉಪ್ಪಿನಂಗಡಿ: ತನ್ನ ಅಗತ್ಯ ಕೆಲಸ ನಿಮಿತ್ತ ಕಾರಿನಲ್ಲಿ ಕಾರ್ಕಳಕ್ಕೆ ತೆರಳುತ್ತಿದ್ದ ಜಮಾಲ್ ಕರಾಯ ಅವರು ರಸ್ತೆ ಬದಿ ತುಂಬು ಗರ್ಭಿಣಿಯೋರ್ವರು ಆಸ್ಪತ್ರೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದನ್ನು ನೋಡಿ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಆ ಮಹಿಳೆ ಕಾರಿನಲ್ಲಿ ಹೆರಿಗೆಯಾದ ಘಟನೆ ಜು.1ರಂದು ನಡೆದಿದೆ. ವೈದ್ಯರ ದಿನದಂದೇ ತನ್ನ ಮಾನವೀಯ ಕಾರ್ಯದ ಮೂಲಕ ಜಮಾಲ್ ಅವರು ಈ ಮಹಿಳೆಯ ಪಾಲಿಗೆ ವೈದ್ಯರಂತೆ ಬಂದು ಅವರ ಪ್ರಾಣವನ್ನು ಕಾಪಾಡಿದ್ದಾರೆ.

ಜಮಾಲ್ ಅವರು ಕಾರ್ಕಳಕ್ಕೆ ಹೋಗಲು ಹೊರಟ ಸಂದರ್ಭ ಸುನ್ನತ್‌ಕೆರೆ ನಿವಾಸಿ ಇಕ್ಬಾಲ್ ಅವರು ತನ್ನ ಪತ್ನಿ ತುಂಬು ಗರ್ಭಿಣಿ ಅಳದಂಗಡಿಯ ಸಫಿಯಾ ಅವರೊಂದಿಗೆ ಆಸ್ಪತ್ರೆಗೆ ಹೋಗಲು ರಸ್ತೆ ಮಧ್ಯೆ ವಾಹನಕ್ಕಾಗಿ ಕಾಯುತ್ತಿದ್ದರು. ಆಸ್ಪತ್ರೆಗೆ ತೆರಳಲು ವಾಹನಗಳು ಸಿಗದೆ ಇರುವ ಕಂಗಾಲದ ದಂಪತಿಯ ಸಂಕಷ್ಟ, ಪರದಾಟ ಗಮನಿಸಿದ ಇಕ್ಬಾಲ್ ಅವರು ಕಾರು ನಿಲ್ಲಿಸಿ ಅವರನ್ನು ವಿಚಾರಿಸಿದ್ದು ತನ್ನ ಪ್ರಯಾಣವನ್ನು ಮೊಟಕುಗೊಳಿಸಿ, ಗರ್ಭಿಣಿ ಹಾಗೂ ಆಕೆಯ ಪತಿಯನ್ನು ಕುಳ್ಳಿರಿಸಿ ಬೆಳ್ತಂಗಡಿ ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಸಫಿಯಾ ಅವರಿಗೆ ಹೆರಿಗೆ ನೋವು ಜಾಸ್ತಿಯಾಗಿದ್ದು, ಅವರು ಕಾರಿನಲ್ಲೇ ತನ್ನ ಚೊಚ್ಚಲ ಗಂಡು ಮಗುವಿಗೆ ಜನ್ಮ ನೀಡಿದರು. ಆ ಸಂದರ್ಭದಲ್ಲಿ ಗರ್ಭಿಣಿಗೆ ನೆರವಾಗಿದ್ದೇ ಪತಿ ಇಕ್ಬಾಲ್ ಹಾಗೂ ಜಮಾಲ್.
ಬಳಿಕ ಜಮಾಲ್ ಅವರು ತನ್ನ ಕಾರಿನಲ್ಲಿಯೇ ಮಹಿಳೆಯನ್ನು ಬೆಳ್ತಂಗಡಿಯ ಸಾರ್ವಜನಿಕ ಸಮುದಾಯ ಆಸ್ಪತ್ರೆಗೆ ಸೇರಿಸಿದ್ದಾರೆ. ಮಗು ಮತ್ತು ತಾಯಿಯ ಆರೋಗ್ಯವಾಗಿದ್ದಾರೆ. ಜಮಾಲ್ ಅವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.