‘ಅಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾಗಿಯಾದ ಬಿಎಸ್‌ಎಫ್ ಯೋಧ ಪದ್ಮನಾಭ ಗೌಡರವರಿಗೆ ಕುಂಬ್ರದಲ್ಲಿ ಸ್ವಾಗತ, ಮಾಲಾರ್ಪಣೆ

0

ತಾಯಂದಿರ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕ ಶಾಸ್ತಿ ಮಾಡಿದ ಯೋಧರನ್ನು ಗೌರವಿಸೋಣ: ತ್ರಿವೇಣಿ ಪಲ್ಲತ್ತಾರು

ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪದ್ಮನಾಭ ಗೌಡರವರು ಇದ್ದದ್ದು ಹೆಮ್ಮೆಯ ವಿಚಾರ: ಬೂಡಿಯಾರ್ ರಾಧಾಕೃಷ್ಣ ರೈ

ಪುತ್ತೂರು: ಪಹಲ್ಗಾಮ್‌ನಲ್ಲಿ ನಡೆದ ಘೋರ ಹತ್ಯಾಕಾಂಡದಲ್ಲಿ ಅಮಾಯಕ ಮಹಿಳೆಯರ ಗಂಡಂದಿರನ್ನು ಕೊಲ್ಲುವ ಮೂಲಕ ಅವರ ಹಣೆಯ ಸಿಂಧೂರ ಅಳಿಸಿದ ಭಯೋತ್ಪಾದಕರಿಗೆ ‘ಅಪರೇಷನ್ ಸಿಂಧೂರ’ ದ ಮೂಲಕ ತಕ್ಕ ಶಾಸ್ತಿ ಮಾಡಿದ ನಮ್ಮ ವೀರ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ದೇಶಕ್ಕೆ ನಮ್ಮ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟ ಪದ್ಮನಾಭ ಗೌಡರವರು ನಿವೃತ್ತಿಗೊಂಡು ನಮ್ಮೂರಿಗೆ ಆಗಮಿಸಿದ್ದಾರೆ. ಅವರಿಗೆ ನಮ್ಮೆಲ್ಲರ ಪರವಾಗಿ ಆತ್ಮೀಯ ಸ್ವಾಗತವನ್ನು ಬಯಸುತ್ತಾ ಅವರ ಮುಂದಿನ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಶುಭ ಹಾರೈಸಿದರು.


ಭಾರತೀಯ ಸೇನೆಯಲ್ಲಿ 40 ವರ್ಷ 1 ತಿಂಗಳು 22 ದಿನಗಳ ಕಾಲ ಸೇವೆ ಸಲ್ಲಿಸಿದ ಪದ್ಮನಾಭ ಗೌಡ ಸೊರಂಜರವರು ಜೂ.30ರಂದು ನಿವೃತ್ತಿಗೊಂಡು ತನ್ನ ತಾಯ್ನಾಡಾದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸೊರಂಜಗೆ ಜು.3ರಂದು ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಇವರು ಕುಂಬ್ರ ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿದರು.

ನಮ್ಮ ದೇಶದ ಗಡಿ ಕಾಯುವ ಸೈನಿಕರೇ ನಮಗೆ ಶ್ರೀರಕ್ಷೆಯಾಗಿದ್ದಾರೆ. ಅವರಿಲ್ಲದೇ ಇದ್ದರೆ ನಾವಿಂದು ಇಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿರಲಿಲ್ಲ ಎಂದ ತ್ರಿವೇಣಿಯವರು ಸೈನಿಕರನ್ನು ಗೌರವದಿಂದ ಕಾಣುವ ಮೂಲಕ ಅವರಿಗೆ ವಂದನೆ ಸಲ್ಲಿಸೋಣ ಎಂದು ಹೇಳಿ ಶುಭ ಹಾರೈಸಿದರು.


ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಜೊಸೆಫ್ ಪಿ.ಚೆರಿಯನ್‌ರವರು ಮಾತನಾಡಿ, ಅಪರೇಷನ್ ಸಿಂಧೂರದಂತಹ ಕಾರ್ಯಾಚರಣೆಯಲ್ಲಿ ಭಾಗಿಯಾದ ನಮ್ಮ ಹೆಮ್ಮೆಯ ಯೋಧ ಪದ್ಮನಾಭ ಗೌಡರವರು ಆಗಿದ್ದಾರೆ. ಅವರು ಸೇವೆಯಿಂದ ನಿವೃತ್ತಿಗೊಂಡಿದ್ದು ಮುಂದಿನ ಅವರ ಜೀವನ ಸುಖ,ಶಾಂತಿ, ಆರೋಗ್ಯದಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು. ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಯೋಧರೇ ನಮಗೆ ಶಕ್ತಿ ಅವರಿಲ್ಲದೇ ಇದ್ದರೆ ನಾವು ಇಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಕೂಡ ಸಾಧ್ಯವಿಲ್ಲ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದಾಗಿ ಬಹಳಷ್ಟು ಮಂದಿ ಮಹಿಳೆಯರು ತಮ್ಮ ಗಂಡನನ್ನು ಕಳೆದುಕೊಂಡಿದ್ದಾರೆ. ಅಂತಹ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡುವ ಕೆಲಸವನ್ನು ಅಪರೇಷನ್ ಸಿಂಧೂರದಂತಹ ಕಾರ್ಯಾಚರಣೆಯ ಮೂಲಕ ನಮ್ಮ ಯೋಧರು ಮಾಡಿದ್ದಾರೆ. ಆ ಕಾರ್ಯಾಚರಣೆಯಲ್ಲಿ ಪದ್ಮನಾಭ ಗೌಡರವರು ಇದ್ದದ್ದು ಹೆಮ್ಮೆಯ ವಿಷಯ ಎಂದು ಹೇಳಿ ಶುಭ ಹಾರೈಕೆಯೊಂದಿಗೆ ಅಭಿನಂದನೆ ಸಲ್ಲಿಸಿದರು. ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಉದ್ಯಮಿ ಮಿತ್ರಂಪಾಡಿ ಪುರಂದರ ರೈ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ, ಯೋಧ ಪದ್ಮನಾಭ ಗೌಡರವರ ಪತ್ನಿ ಸುಶೀಲಾ, ಮತ್ತಿತರರು ಉಪಸ್ಥಿತರಿದ್ದರು. ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆದಂಬಾಡಿ ಗ್ರಾಪಂ ಸದಸ್ಯ, ವರ್ತಕರ ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ವಂದಿಸಿದರು. ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ವಿದೀಪ್ ಕುಮಾರ್ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು. ಸಂಘದ ಕೋಶಾಧಿಕಾರಿ ಕೆ.ಪಿ ಗೌಡ, ನಿರ್ದೇಶಕ ಬಾಲಕೃಷ್ಣ ಗೌಡ, ಸದಸ್ಯರುಗಳು, ವರ್ತಕರ ಸಂಘದ ಉದಯ ಆಚಾರ್ಯ ಕೃಷ್ಣನಗರ ಹಾಗೂ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


ಹಾರಾರ್ಪಣೆಯೊಂದಿಗೆ ಅದ್ಧೂರಿ ಸ್ವಾಗತ
ನಿವೃತ್ತ ಯೋಧ ಪದ್ಮನಾಭ ಗೌಡ ದಂಪತಿಗೆ ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ, ಕುಂಬ್ರ ವರ್ತಕರ ಸಂಘ, ಒಳಮೊಗ್ರು ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರುಗಳು ಮಾಲಾರ್ಪಣೆ, ಹೂಗುಚ್ಚ ಅರ್ಪಣೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಸ್ವಾಗತ ಸ್ವೀಕರಿಸಿದ ಪದ್ಮನಾಭ ಗೌಡರವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಗಡಿ ಪ್ರದೇಶಗಳಲ್ಲೇ ಅತೀ ಹೆಚ್ಚು ಸೇವೆ
1985 ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದ ಪದ್ಮನಾಭ ಗೌಡರವರು ಭಾರತದ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಗೆ ಸೇರ್ಪಡೆಗೊಂಡು ಗಡಿ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ 13 ವರ್ಷ ಸೇವೆ, ಪಂಜಾಬ್-ಪಾಕ್ ಗಡಿ ಪ್ರದೇಶ, ಬಾಂಗ್ಲಾ-ಭಾರತ ಗಡಿ, ಭಾರತ-ಪಾಕ್ ಗಡಿ ಹೀಗೆ ಭಾರತರ ಗಡಿ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here