ನೆಲ್ಯಾಡಿ: ಇಲ್ಲಿನ ಶಾಂತಿಬೆಟ್ಟು ನಿವಾಸಿ, ಲಾರಿ ಚಾಲಕ ಮೊಹಮ್ಮದ್ ನಿಶಾನ್ ಎಂಬವರ ಮೇಲೆ ಸಕಲೇಶಪುರ ಬಾಳುಪೇಟೆ ಸಮೀಪ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೀರಜ್, ನವೀನ್ ಮತ್ತು ರಾಜು ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹಲ್ಲೆಗೆ ಬಳಸಿದ್ದ ದೊಣ್ಣೆ ಹಾಗೂ ಕಾರು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೊಹಮ್ಮದ್ ನಿಶಾನ್ ಅವರು ಜು.1ರಂದು ಸಂಜೆ ಮಂಗಳೂರಿನ ತುಂಬೆಯಿಂದ ಪ್ಲೈವುಡ್ ಲೋಡ್ ಮಾಡಿಕೊಂಡು ಬೆಂಗಳೂರಿಗೆ ಹೊರಟು ಮಧ್ಯರಾತ್ರಿ 12 ಗಂಟೆಗೆ ಸಕಲೇಪುರ ಬಾಳುಪೇಟೆ ಬೈಪಾಸ್ನಲ್ಲಿ ಸಂಚರಿಸುತ್ತಿದ್ದ ವೇಳೆ ಡಸ್ಟರ್ ಕಾರಿನಲ್ಲಿ ಬಂದ ಆರೋಪಿಗಳು ಲಾರಿಯನ್ನು ಅಡ್ಡಗಟ್ಟಿ, ವಾಹನದ ಗಾಜು ಪುಡಿಗೈದು, ಚಾಲಕ ಮೊಹಮ್ಮದ್ ನಿಶಾನ್ರ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡು ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೊಹಮ್ಮದ್ ನಿಶಾನ್ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.