ಬರಹ: ಶರತ್ ಕುಮಾರ್ ಪಾರ
ಪುತ್ತೂರು:ಪುತ್ತೂರು, ಸುಳ್ಯ ಸೇರಿದಂತೆ ಕರ್ನಾಟಕದ ವಿವಿಧೆಡೆ ಹಲವಾರು ವರ್ಷಗಳಿಂದ ವಾಸವಾಗಿರುವ ಮುಖಾರಿ/ಮೂವಾರಿ ಸಮುದಾಯದ ಹೆಸರು ಜಾತಿ ಪಟ್ಟಿಯಲ್ಲಿಲ್ಲದ ಕಾರಣ ಜಾತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.ಈ ಸಂಬಂಧ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಪೀಠ ಸರಕಾರಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಜು.14ಕ್ಕೆ ನಿಗದಿಪಡಿಸಿದೆ.
ಮುಖಾರಿ/ಮೂವಾರಿ ಸಮುದಾಯದ ಹಿನ್ನಲೆ:
ಕೇರಳ ಮೂಲದವರಾದ ಮುಖಾರಿ ಸಮುದಾಯದವರು ಸುಮಾರು 90 ವರ್ಷಗಳ ಹಿಂದೆ ಕರ್ನಾಟಕಕ್ಕೆ ವಲಸೆ ಬಂದವರು.ಮನೆಯ ಗೋಡೆಯ ಕೆಲಸ ಮಾಡುತ್ತಿದ್ದ ಇವರನ್ನು ಕೇರಳದಲ್ಲಿ ಮೂವಾರಿ ಎಂದು ಕರೆಯಲಾಗುತ್ತಿದೆ.ಕರ್ನಾಟಕದ ಬೇರೆ ಬೇರೆ ಕಡೆ ಅಲ್ಲದೆ ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ ಭಾಗದಲ್ಲಿ ಹೆಚ್ಚಾಗಿ ಇವರು ನೆಲೆಸಿದ್ದಾರೆ.ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಪಡುವನ್ನೂರು, ಮಾಡ್ನೂರು, ಅರಿಯಡ್ಕ ಮುಂತಾದ ಪ್ರದೇಶದಲ್ಲಿ ಸುಮಾರು 100 ಕುಟುಂಬಗಳು ನೆಲೆಸಿವೆ.
ಜಾತಿ ಪ್ರಮಾಣ ಸಿಗದೆ ತೊಂದರೆ:
ಮುಖಾರಿ ಸಮುದಾಯದವರಿಗೆ ಆಧಾರ್ ಕಾರ್ಡ್, ವೋಟರ್ ಐಡಿ, ಇತರ ಸೌಲಭ್ಯಗಳು ದೊರಕಿದೆ.ಆದರೆ ಜಾತಿಪಟ್ಟಿಯಲ್ಲಿ ಈ ಸಮುದಾಯದ ಹೆಸರು ನಮೂದಿಸದ ಕಾರಣ ಸಮುದಾಯದ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯಲಾಗದೆ ಕಷ್ಟ ಅನುಭವಿಸುವಂತಾಗಿದೆ.ಹಿಂದೆ ಈ ಸಮುದಾಯದವರು ಅಷ್ಟೇನೂ ವಿದ್ಯಾವಂತರಾಗಿರಲಿಲ್ಲ.ಆದರೆ,ಇಂದಿನ ಯುವಕ ಯುವತಿಯರು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.ವಿದ್ಯಾಭ್ಯಾಸ, ಉದ್ಯೋಗ, ಸ್ಕಾಲರ್ಶಿಪ್ ಮುಂತಾದ ಸೌಲಭ್ಯ ಪಡೆಯಲು ಜಾತಿ ಪ್ರಮಾಣ ಪತ್ರ ಅಗತ್ಯವಾಗಿರುವ ಕಾರಣ ಇವರು ತೊಂದರೆ ಅನುಭವಿಸುತ್ತಿದ್ದಾರೆ.
ಹೋರಾಟ ನಡೆಸಿದರೂ ಪ್ರಯೋಜನವಿಲ್ಲ:
ಈ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳುತ್ತಾ ಬಂದಿದೆ.ಇದಕ್ಕಾಗಿ ಹಲವು ಹೋರಾಟಗಳು ನಡೆದಿವೆ.ಸಮುದಾಯದ ಹಿರಿಯರು ಪುತ್ತೂರಿನ ಜನಪ್ರಿಯ ವೈದ್ಯರಾದ ಡಾ.ಎಂ.ಕೆ.ಪ್ರಸಾದ್ ಅವರ ನೇತೃತ್ವದಲ್ಲಿ ಅನೇಕ ಪ್ರಯತ್ನ ನಡೆಸಿದರು.ಬಳಿಕ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆಯವರು ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು.ಆದರೆ ಈ ಎಲ್ಲ ಹೋರಾಟ ಕೇವಲ ಮುಖಾರಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕುರಿತಾಗಿ ಇತ್ತು ಅದು ಕೂಡಾ ಇಲ್ಲಿಯವರೆಗೆ ಪ್ರಯೋಜನಕಾರಿಯಾಗಿಲ್ಲ
ಚಂದ್ರಹಾಸ ಈಶ್ವರಮಂಗಲ ನೇತೃತ್ವದಲ್ಲಿ ಕೋರ್ಟ್ ಮೊರೆ:
ಜಾತಿ ಪ್ರಮಾಣ ಪತ್ರ ಪಡೆಯಲು ಹೆಣಗಾಡುತ್ತಿರುವ ಈ ಸಮುದಾಯದವರ ಬೆನ್ನಿಗೆ ನಿಂತವರು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲರವರು. ಇವರ ವಾರ್ಡ್ನ ಚಿಮಿನಿಗುಡ್ಡೆ ಪ್ರದೇಶದಲ್ಲಿ ಹೆಚ್ಚು ಇರುವ ಈ ಸಮುದಾಯವರನ್ನು ಸೇರಿಸಿ ಇತ್ತೀಚೆಗೆ ಸಭೆ ನಡೆಸಿದ್ದರು.ಇದುವರೆಗಿನ ಹೋರಾಟದ ದಾಖಲೆಗಳನ್ನು ಪರಿಶೀಲಿಸಿ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದರು.ಪರಿಣಾಮ, ಹೈಕೋರ್ಟ್ ವಕೀಲರಾದ ರಾಜಾರಾಮ್ ಸೂರ್ಯಂಬೈಲು ಅವರ ಮಾರ್ಗದರ್ಶನದಂತೆ ಆರಂಭದಲ್ಲಿ ಪುತ್ತೂರು ತಹಶೀಲ್ದಾರರಿಗೆ ಮುಖಾರಿ ಸಮುದಾಯದ 20 ಶಾಲಾ ಮಕ್ಕಳ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಲಾಯಿತು.ಪರಿಶೀಲಿಸಿ ಕ್ರಮಕೈಗೊಳ್ಳಲು ತಹಶೀಲ್ದಾರ್ ಅವರು ಗ್ರಾಮ ಆಡಳಿತಾಽಕಾರಿಗೆ ಸೂಚನೆ ನೀಡಿದರು.ತನಿಖೆ ನಡೆಸಿದ ಗ್ರಾಮ ಆಡಳಿತ ಅಽಕಾರಿಯವರು,‘ಸರಕಾರದ ಜಾತಿ ಪಟ್ಟಿಯಲ್ಲಿ ನಿಮ್ಮ ಸಮುದಾಯದ ಹೆಸರು ಇಲ್ಲ’ ಎಂದು ವರದಿ ನೀಡಿದ್ದರು.ಇವರ ವರದಿ ಆಧರಿಸಿ ಕಂದಾಯ ನಿರೀಕ್ಷಕರು ಕೂಡ ಇದೇ ವರದಿಯನ್ನು ತಹಶೀಲ್ದಾರ್ ಅವರಿಗೆ ನೀಡಿದ್ದರು.ಈ ವರದಿಗಳ ಹಿನ್ನೆಲೆಯಲ್ಲಿ ತಹಶೀಲ್ದಾರರು, ‘ಕರ್ನಾಟಕ ಸರಕಾರದ ತಂತ್ರಾಂಶದಲ್ಲಿ ಮುಖಾರಿ ಜಾತಿ ದಾಖಲಾಗದ ಕಾರಣ ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ’ ಎಂದು ಅರ್ಜಿದಾರರಿಗೆ ಹಿಂಬರಹ ನೀಡಿದ್ದರು.
ಹೈಕೋರ್ಟ್ನಲ್ಲಿ ರಿಟ್:
ಪುತ್ತೂರು ತಹಶೀಲ್ದಾರ್ರವರು ನೀಡಿದ ಹಿಂಬರಹವನ್ನು ಪ್ರಶ್ನಿಸಿ ಮುಖಾರಿ ಸಮುದಾಯದ ಉದಯ ಮುಖಾರಿ ಮತ್ತು ಇತರರ ಹೆಸರಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು.ವಕೀಲರಾದ ರಾಜಾರಾಮ್ ಸೂರ್ಯಂಬೈಲು, ನಿತೇಶ್ ರೈ ಕೋಟೆ ಹಾಗೂ ಪುತ್ತೂರಿನ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲರವರ ಮೂಲಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಜಾತಿ ಪ್ರಮಾಣ ಪತ್ರ ಪಡೆಯುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು:
ಜಾತಿ ಪ್ರಮಾಣ ಪತ್ರ ಪಡೆಯುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು ಹಾಗೂ ಮೂಲಭೂತ ಹಕ್ಕು. ಶಾಲಾ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು, ಯಾವುದಾದರು ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು, ಮನೆ ನಿರ್ಮಾಣ ಮಾಡಲು, ಸರಕಾರದಿಂದ ಸಹಾಯಧನ ಪಡೆಯಲು, ಜಾತಿ ಪ್ರಮಾಣ ಪತ್ರ ಅತೀ ಅವಶ್ಯಕವಾಗಿದೆ.ಈ ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಜಾತಿ ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ರಿಟ್ ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಾಜಾರಾಮ್ ಸೂರ್ಯಂಬೈಲು ಅವರು ವಾದ ಮಂಡಿಸಿ ನ್ಯಾಯಾಲಯದ ಗಮನ ಸೆಳೆದಿದ್ದಾರೆ.ವಾದವನ್ನು ಆಲಿಸಿದ ಉಚ್ಛ ನ್ಯಾಯಾಲಯ, ಜಾತಿ ಪ್ರಮಾಣ ಪತ್ರ ಪಡೆಯಲು ತಂತ್ರಾಂಶದಲ್ಲಿ ಅವಕಾಶ ಇಲ್ಲದೇ ಇರುವ ಕಾರಣದ ಕುರಿತು ಉತ್ತರ ಕೇಳಿ ಕರ್ನಾಟಕ ಸರಕಾರಕ್ಕೆ ನೋಟಿಸ್ ಮಾಡಿದೆ.ಮುಂದಿನ ವಿಚಾರಣೆ ಜು.14ಕ್ಕೆ ನಡೆಯಲಿದೆ.
ಜಾತಿ ಪಟ್ಟಿಯಲ್ಲಿಲ್ಲದ ಸಮುದಾಯ
ಮುಖಾರಿ ಸಮುದಾಯ ಕರ್ನಾಟಕದ ಜಾತಿಪಟ್ಟಿಯಲ್ಲಿಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ.ಅದೆಷ್ಟೋ ಕುಟುಂಬಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಮುಖಾರಿ ಜಾತಿ ಹೇಳಲು ಮಾತ್ರವೇ ಹೊರತು ಪಟ್ಟಿಯಲ್ಲಿ ಇಲ್ಲ.ಕೇರಳದಲ್ಲಿ ಈ ಜಾತಿಯನ್ನು ಎಸ್ಟಿ ಪಂಗಡಕ್ಕೆ ಸೇರಿಸಲಾಗಿದೆ.ಅಲ್ಲಿ ಸರಕಾರದ ಎಲ್ಲಾ ಸೌಲಭ್ಯಗಳು ದೊರೆಯುತ್ತಿದೆ.ಆದರೆ ಕರ್ನಾಟಕದಲ್ಲಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಯಾರೂ ಇಷ್ಟರವರೆಗೆ ಮನಸ್ಸು ಮಾಡಲಿಲ್ಲ
ಮುಖಾರಿ/ಮೂವಾರಿ ಸಮುದಾಯ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ನೆಲೆಸಿದೆ.ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಹಾಗೂ ಇತರ ಭಾಗದಲ್ಲಿ ಸುಮಾರು ೧೦೦ ಕುಟುಂಬಗಳಿವೆ. ಈ ಸಮುದಾಯದ ಇಂದಿನ ಪೀಳಿಗೆ ವಿದ್ಯಾವಂತರಾಗಿದ್ದು ಅವರಿಗೆ ಜಾತಿ ಪ್ರಮಾಣ ಪತ್ರ ಅಗತ್ಯವಾಗಿದೆ.ಸ್ಕಾಲರ್ಶಿಪ್ ಸೇರಿದಂತೆ ಸರಕಾರದ ಯಾವುದೇ ಸೌಲಭ್ಯ ಪಡೆಯಲು ಕೂಡ ಅಗತ್ಯ ಇರುವುದು ಜಾತಿ ಪ್ರಮಾಣ ಪತ್ರ.ಎಲ್ಲಿಂದಲೋ ಬಂದ ವಲಸೆ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿರುವ ಈ ಕಾಲದಲ್ಲಿ ಮುಖಾರಿ ಸಮುದಾಯದವರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಆದುದರಿಂದ ಕರ್ನಾಟಕದ ಯಾವುದಾದರೂ ಜಾತಿಪಟ್ಟಿಗೆ ಸೇರಿಸಿ ಜಾತಿಪ್ರಮಾಣ ಪತ್ರ ಸಿಗುವ ಹಾಗೆ ಆಗಬೇಕು.ಹಲವಾರು ಜನಪ್ರತಿನಿಽಗಳಿಗೆ, ಶಾಸಕರಿಗೆ ಬೇಡಿಕೆ ಸಲ್ಲಿಸಲಾಗಿದೆ.ಯಾರೂ ಕೂಡ ಇಷ್ಟರವರೆಗೆ ಮನಸ್ಸು ಮಾಡಲೇ ಇಲ್ಲ
ಚಂದ್ರಹಾಸ ಈಶ್ವರಮಂಗಲ
ಸದಸ್ಯರು, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್