ಭಕ್ತರು ದೇವಸ್ಥಾನದ ಆಸ್ತಿ – ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಂದಿನ ದಿನ ನಡೆಯುವ ಜೀರ್ಣೋದ್ದಾರ ಮತ್ತು ಅಭಿವೃದ್ಧಿಕಾರ್ಯಗಳಿಗೆ ಪೂರಕವಾಗಿ ಗ್ರಾಮವಾರು ಭಕ್ತ ಸಮಿತಿ ರಚನಾ ಕಾರ್ಯ ನಡೆಯುತ್ತಿದ್ದು, ಜು. ೧ರಂದು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಹಾಲಿಂಗೇಶ್ವರ ಭಕ್ತ ಸಮಿತಿ ಕಾರ್ಪಾಡಿ ರಚನೆಯಾಗಿದೆ.
ಭಕ್ತ ಸಮಿತಿ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ದೇವಸ್ಥಾನ, ಮಠ, ಮಂದಿರಗಳೇ ನಿಜವಾದ ನೆಮ್ಮದಿಯ ತಾಣಗಳು. ಎಷ್ಟೇ ಜಂಜಾಟವಿದ್ದರೂ ಒಂದಷ್ಟು ಸಮಯ ದೇವಸ್ಥಾನದಲ್ಲಿ ಕುಳಿತು ಬಂದರೆ ನೆಮ್ಮದಿ ಕಂಡುಕೊಳ್ಳಬಹುದು ಇಂತಹ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಕಾರ್ಯದಲ್ಲೂ ಭಕ್ತರ ಸಹಕಾರ ಅಗತ್ಯ, ಭಕ್ತರು ದೇವಸ್ಥಾನದ ಆಸ್ತಿ ಎಂದು ಹೇಳಿದರು.
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪವಿತ್ರ ರೈ, ಉಷಾ ಆಳ್ವ, ಯಾದವ ಗೌಡ, ಪ್ರಜ್ವಲ್ ರೈ ತೊಟ್ಲ, ದೇವಳದ ಅರ್ಚಕ ಸೂರ್ಯನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ಭಕ್ತ ಸಮಿತಿ ರಚನೆ
ಮಹಾಲಿಂಗೇಶ್ವರ ದೇವಸ್ಥಾನ ಭಕ್ತ ಸಮಿತಿ ಕಾರ್ಪಾಡಿ ಇದರ ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಕಾಣಿಕೆಮನೆ, ಅಧ್ಯಕ್ಷರಾಗಿ ಪವಿತ್ರ ರೈ ಬಾಳಿಲ, ಉಪಾಧ್ಯಕ್ಷರಾಗಿ ಪೂರ್ಣಿಮಾ ರೈ ಕಾರ್ಪಾಡಿ, ಬಾಬು ನಾಯ್ಕ ಕಬ್ಬಿನಹಿತ್ಲು, ಸುಮಿತಾ ಶೆಟ್ಟಿ ಮೇರ್ಲ, ಭಾಗ್ಯೇಶ್ ನಾಯ್ಕ್ ಮೇಗಿನಪಂಜ ಮನೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್ ಭಂಡಾರಿ, ಖಜಾಂಜಿ ದಯಾನಂದ ಕರಿಮಜಲು ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಸುಮಾರು ೫೦ ಮಂದಿಯ ಸದಸ್ಯರ ಪಟ್ಟಿಯನ್ನು ಮಂಡಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಭಕ್ತ ಸಮಿತಿಯ ಪದಾಧಿಕಾರಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದ ಮತ್ತು ಶಲ್ಯ ತೊಡಿಸಿ ಗೌರವಿಸಿದರು.